ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ ಆಸ್ತಿತ್ವಕ್ಕೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ವಿಟ್ಲ, ಈಶ್ವರಮಂಗಳ ಮತ್ತು ಮಂಗಳೂರು ತಾಲೂಕುಗಳಲ್ಲಿ ವಾಸಿಸುತ್ತಿರುವ ವಾಣಿಯ ಗಾಣಿಗ ಸಮಾಜದ 5 ತಾಲೂಕು ಸಂಘಗಳ ಪ್ರಮುಖರನ್ನು ಸೇರಿಸಿ ದಕ್ಷಿಣ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘವನ್ನು ಸ್ಥಾಪಿಸಲಾಗಿದ್ದು, ಇದರ ಉದ್ಘಾಟನಾ ಕಾರ್ಯಕ್ರಮ ಡಿ. 29ರಂದು ಬೆಳಗ್ಗೆ 10.30ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ.ರಾಮ ಮುಗ್ರೋಡಿ ತಿಳಿಸಿದರು.
ಸಂಸದ ಬ್ರಿಜೇಶ್ ಚೌಟ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮೇಯರ್ ಮನೋಜ್ ಕುಮಾರ್, ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ. ಭರತ್ ಶೆಟ್ಟಿ, ಅಶೋಕ್ ಕುಮಾರ್ ರೈ, ಅಖಿಲ ಕರ್ನಾಟಕ ಗಾಣಿಗರ ಸಂಘದ ಅಧ್ಯಕ್ಷ ರಾಜಶೇಖರ್, ಉದ್ಯಮಿ ಸುರೇಶ್ ಬಟ್ಟಂಪಾರೆ, ಪೊಲೀಸ್ ನಿರೀಕ್ಷಕ ಪ್ರಕಾಶ್ ಕೆ., ಸಾಫ್ಟ್ ವೇರ್ ಸ್ವಿಗ್ಗಿ ನಿರ್ದೇಶಕ ಪ್ರೀತಂ ಕೆ. ಎಸ್. ಬೆಂಗಳೂರು, ನಿವೃತ್ತ ಮುಖ್ಯಶಿಕ್ಷಕಿ ಶಂಕರಿ ಪಟ್ಟೆ, ನಿವೃತ್ತ ಉಪನ್ಯಾಸಕಿ ಸುಕನ್ಯ ದೇಲಂತಬೆಟ್ಟು, ಸಂಘದ ಗೌರವಾಧ್ಯಕ್ಷ ಎಸ್.ಶಂಕರ ಪಾಟಾಳಿ ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಖ್ಯಾತ ಕಿರುತೆರೆ ನಟ ಕೌಶಿಕ್ ರಾಮ್ ಪಾಲ್ಗೊಳ್ಳಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಸಂಘದ ಪ್ರಧಾನ ಕಚೇರಿ ಮಂಗಳೂರಿನಲ್ಲಿದೆ. ಜಿಲ್ಲೆಯ ಐದು ತಾಲೂಕುಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಕಾರ್ಯಾಚರಿಸುತ್ತಿರುವ ಪಾಟಾಳಿ ಗಾಣಿಗ, ವಾಣಿಯ ಗಾಣಿಗ ಸಂಘಗಳ ಪದಾಧಿಕಾರಿಗಳು ಒಟ್ಟು ಸೇರಿ ‘ದಕ್ಷಿಣ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ ಮಂಗಳೂರು’ ಎಂಬ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಸಮುದಾಯದಲ್ಲಿರುವ ಕಡು ಬಡವರಿಗೆ ಸಹಾಯ ಮಾಡುವುದು, ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಸಹಕರಿಸುವುದು, ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು, ಸಮಾಜದಲ್ಲಿ ವಿಶೇಷ ಸಾಧನೆಗೈದವರನ್ನು ಗುರುತಿಸಿ ಗೌರವಿಸುವುದು, ವಿದ್ಯಾನಿಧಿ- ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸುವುದು. ಸಹಕಾರಿ ಸಂಘಗಳನ್ನು ಸ್ಥಾಪಿಸಿ ಯುವ ಜನಾಂಗಕ್ಕೆ ಉದ್ಯೋಗ ಕಲ್ಪಿಸಲು ಪ್ರಯತ್ನಿಸುವುದು ಸೇರಿದಂತೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಸಂಘದ ಅಧಿಕೃತ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸಭಾ ಕಾರ್ಯಕ್ರಮದ ನಂತರ ಜಿಲ್ಲೆಯ ಐದು ತಾಲೂಕುಗಳ ಸಮುದಾಯ ಬಾಂಧವರಿಂದ ಭಾರತದ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದರು.
ಸಂಘದ ಗೌರವಾಧ್ಯಕ್ಷ ಎಸ್. ಶಂಕರ ಪಾಟಾಳಿ ಮುಕ್ರಂಪಾಡಿ, ಪದಾಧಿಕಾರಿಗಳಾದ ಕೃಷ್ಣ ಡಿ.ಎಸ್. ಮಂಗಳೂರು, ಎಸ್. ದಾಮೋದರ ಪಾಟಾಳಿ ಪುತ್ತೂರು, ರವಿಚಂದ್ರ ಭಟ್ರಕುಮೇರು ಉಪಸ್ಥಿತರಿದ್ದರು.