
ಎಸ್.ಡಿ.ಎಂ. ಕಾನೂನು ಕಾಲೇಜು ಮಂಗಳೂರಿನಲ್ಲಿ ಸುವರ್ಣ ಮಹೋತ್ಸವದ ಸಂಭ್ರಮ: ಕೇರಳ ಹೈಕೋರ್ಟ್ ನ್ಯಾ. ಮುರಳೀಕೃಷ್ಣ, ಹಿರಿಯ ನ್ಯಾಯವಾದಿ ಉದಯ ಹೊಳ್ಳ ಭಾಗಿ
ಮಂಗಳೂರು: ಎಸ್.ಡಿ.ಎಂ. ಕಾಲೇಜು ಕೇವಲ ಕಾನೂನು ಜ್ಞಾನ ಮಾತ್ರವಲ್ಲದೆ ವಿದ್ಯಾರ್ಥಿಗಳಲ್ಲಿ ಸಮಗ್ರತೆ, ನ್ಯಾಯಸಮ್ಮತತೆ ಮತ್ತು ಸೇವೆಯಂತಹ ಜೀವನ ಮೌಲ್ಯಗಳನ್ನು ಕಲಿಸುತ್ತಿದೆ ಎಂದು ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಮುರಳೀಕೃಷ್ಣ ಹೇಳಿದರು.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಸುವರ್ಣ ಮಹೋತ್ಸವದ ಸಂಭ್ರಮದ ಮೊದಲ ದಿನದಂದು (ಡಿ14) ಸಂಸ್ಥಾಪಕರ ದಿನಾಚರಣೆಯೊಂದಿಗೆ ಆರಂಭಗೊಂಡಿತು. ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ನಡೆಸ ಸಂಮಾರಂಭದಲ್ಲಿ ಕೇರಳ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ, ಎಸ್.ಡಿ. ಎಂ. ಕಾನೂನು ಕಾಲೇಜಿನ ಪೂರ್ವ ವಿದ್ಯಾರ್ಥಿ ನ್ಯಾ.ಮುರಳೀ ಕೃಷ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
"ನಮ್ಮ ಪ್ರಜಾಪ್ರಭುತ್ವದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಲ್ಲಿ ಜನರು ಅತಿಹೆಚ್ಚು ಅವಲಂಬಿಸಿರುವುದು ನ್ಯಾಯಾಂಗವನ್ನು. SDM ಕಾನೂನು ಕಾಲೇಜಿನಂತಹ ಸಂಸ್ಥೆಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಈವರೆಗೆ ಸಂಸ್ಥೆಯು ಸಮಾಜದ ಪ್ರಗತಿಯಲ್ಲಿ ಕೈಜೋಡಿಸುವ ಅಸಂಖ್ಯಾತ ಕಾನೂನು ಉತ್ಸಾಹಿಗಳನ್ನು ಬೆಳೆಸಿದೆ. ಸುವರ್ಣ ಮಹೋತ್ಸವದ ಆಚರಣೆಯ ಸಂಭಮದೊಂದಿಗೆ SDM ಕಾನೂನು ಕಾಲೇಜು ಮುಂದೆಯೂ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ತೊಡಗುವ ಇನ್ನಷ್ಟು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲಿ ಎಂದು ಆಶಯ ವ್ಯಕ್ತ ಪಡಿಸಿದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಉದಯ ಹೊಳ್ಳ ಪ್ರಧಾನ ಭಾಷಣ ಮಾಡಿದರು. ಭಾರತದ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ, ಕಾಲೇಜಿನ ಪೂರ್ವ ವಿದ್ಯಾರ್ಥಿ ರೋಹಿತ್ ರಾವ್ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಮುರಳಿ ಕೃಷ್ಣ, ಹಿರಿಯ ನ್ಯಾಯವಾದಿಗಳಾದ ಉದಯ ಹೊಳ್ಳ, ಪ್ರೊ. ಎ. ರಾಜೇಂದ್ರ ಶೆಟ್ಟಿ, ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿ ರೋಹಿತ್ ರಾವ್ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು,
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಡಿ ವೀರೇಂದ್ರ ಹೆಗ್ಗಡೆ ಮಾತನಾಡಿ, ಕಾನೂನು ಮತ್ತು ಧರ್ಮ ಇವೆರಡೂ ನೈತಿಕತೆಯ ಬೇರನ್ನು ಅವಲಂಬಿಸಿವೆ. ಭಾರತೀಯ ಸಂಸ್ಕೃತಿ ಯಲ್ಲಿನ ಕಾನೂನು ಪರಂಪರೆ ಋಷಿಮುನಿ,ವೇದೋಪನಿಷತ್ತುಗಳಿಂದ ಬಂದ ಜ್ಞಾನವನ್ನು ಆಧರಿಸಿ ಕಾರ್ಯನಿರ್ವಹಿಸುತ್ತಿದೆ ಎಂದರು. ಕಾನೂನು ವ್ಯವಸ್ಥೆ ಎಂಬುದು ಪರಸ್ಪರ ಸಂಬಂಧಗಳ ಬೆಸೆಯಲು ಬೇಕಾದ ಮಾನವನ ಸಾಮಾಜಿಕ ನಡವಳಿಕೆ. ಧರ್ಮೋ ರಕ್ಷತಿ ರಕ್ಷಿತಃ, ಸರ್ವೇ ಜನಾ ಸುಖಿನೋ ಭವಂತು ಎಂಬ ವ್ಯಾಖ್ಯಾನಗಳು ಸಾಮಾಜಿಕ ನ್ಯಾಯ ನಿರ್ಮಿಸುವ ಉದ್ದೇಶದಿಂದ ರೂಪಿತವಾಗಿವೆ.ಇದುವರೆಗೆ ಈ ಕಾಲೇಜಿನ ಬೆಳವಣಿಗೆಯಲ್ಲಿ ಹಲವರು ಕೈಜೋಡಿಸಿದ್ದು, ಕಾಲೇಜು ಗುಣಮಟ್ಟದ ಶಿಕ್ಷಣ ವನ್ನು ನೀಡುತ್ತಾ ಬಂದಿದೆ. ಇನ್ನು ಮುಂದೆಯೂ ಕಾಲೇಜು ಕಾಲ ಕಾಲಕ್ಕೆ ತಕ್ಕ ಬದಲಾವಣೆಗಳನ್ನು ಅಳವಡಿಸಿಕೊಳ್ಳುತ್ತಾ, ಯಶಸ್ಸುಗಳಿಸಲಿ ಎಂದು ನುಡಿದರು.
ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲ ಉದಯ ಹೊಳ್ಳ ಅವರು, “1973 ರಲ್ಲಿ, ನಾನು ಕಾನೂನು ಕ್ಷೇತ್ರಕ್ಕೆ ಹೆಜ್ಜೆ ಇಟ್ಟಿದ್ದು, ನನ್ನಂತೆ ಹಲವರನ್ನು ಈ ಕ್ಷೇತ್ರಕ್ಕೆ ನೀಡಿದ ಹೆಗ್ಗಳಿಕೆ ಎಸ್ ಡಿ ಎಂ ಕಾಲೇಜಿಗೆ ಸಲ್ಲುತ್ತದೆ. ಎಸ್ ಡಿ ಎಂ ಕಾಲೇಜು, ಉಚ್ಚ ನ್ಯಾಯಾಲಯದ ನ್ಯಾಯಾಧೀಶರು, ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಹಿರಿಯ ವಕೀಲರು, ಹೆಚ್ಚುವರಿ ಸಾಲಿಸಿಟರ್ ಜನರಲ್ ಮತ್ತು ರಾಷ್ಟ್ರಕ್ಕೆ ಸಮರ್ಪಿತವಾದ ಸೇವಾ-ಆಧಾರಿತ ವಕೀಲರನ್ನು ರೂಪಿಸುವ ಮೂಲಕ ಸಮಾಜಕ್ಕೆ ಗಮನಾರ್ಹ ಕೊಡುಗೆ ನೀಡಿದೆ. ಈ ಸಂಸ್ಥೆಯು ತನ್ನ 50 ವರ್ಷಗಳ ಸುಧೀರ್ಘ ಹಾದಿಯಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ತೊಡಗಿದ್ದು ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗುವಂತಹ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡಿದೆ ಎಂದರು.