ಮನೆಯಲ್ಲೇ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ: ಪ್ರಿಯಾ ರಾಜ್ ಮೋಹನ್

ಮನೆಯಲ್ಲೇ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ: ಪ್ರಿಯಾ ರಾಜ್ ಮೋಹನ್


ಮೂಡುಬಿದಿರೆ: ನಮ್ಮ ಮನೆಯಲ್ಲೇ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಹೊರತು ಸಮಾಜದಿಂದಲ್ಲ ಎಂದು ಸಖಿ ಒನ್ ಸ್ಟಾಪ್ ಸೆಂಟರ್‌ನ ಆಡಳಿತಾಧಿಕಾರಿ ಪ್ರಿಯಾ ರಾಜ್ ಮೋಹನ್ ಹೇಳಿದರು.

ಅವರು ಮಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ಸಖಿ ಒನ್‌ಸ್ಟಾಪ್ ಸೆಂಟರ್ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು, ಸಮುದಾಯ ಆರೋಗ್ಯ ಕೇಂದ್ರ ಮೂಡುಬಿದಿರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್‌ಟೌನ್, ಇನ್ನರ್‌ವೀಲ್ ಕ್ಲಬ್ ಮೂಡುಬಿದಿರೆ ಇವುಗಳ ಸಹಭಾಗಿತ್ವದಲ್ಲಿ ಬುಧವಾರ ಸಮಾಜ ಮಂದಿರದಲ್ಲಿ ನಡೆದ ಲಿಂಗತ್ವಾಧಾರಿತ ದೌರ್ಜನ್ಯ ತಡೆ ಹಾಗೂ ಮಹಿಳಾ ಸಹಾಯವಾಣಿ ಕುರಿತು ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಹೆಣ್ಣು ಮಕ್ಕಳಿಗೆ ಸಮಾಜದಿಂದಾಗುವ ದೌರ್ಜನ್ಯ, ಸಬಲೀಕರಣ ಬಗ್ಗೆ ಮಾತಾಡುವ ನಾವು ನಮ್ಮ ಮನೆಯಲ್ಲಿ ಗಂಡು ಮಕ್ಕಳಿಗೆ ಯಾವುದೇ ಮನೆಯ ಕೆಲಸ ಕಾರ್ಯಗಳನ್ನು ನೀಡದೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದೇವೆ. ಹೆಣ್ಣು ಮಗುವಿಗೆ ಸಣ್ಣ ವಯಸ್ಸಿನಲ್ಲಿಯೇ ಮನೆಯ ಜವಾಬ್ದಾರಿಯನ್ನು ನಿರ್ವಹಿಸಲು ಹಾಗೂ ಅವಳ ಮೇಲೆ ಮಾನಸಿಕ ಹಿಂಸೆ ನಡೆದಾಗಲೂ ಸಹಿಸಿಕೊಳ್ಳುವಂತೆ ಹೇಳುವ ಮೂಲಕ ಅವಳ ಮೇಲೆ ದೌರ್ಜನ್ಯದ ಅಡಿಪಾಯವನ್ನು ನಾವೇ ಹಾಕಿಕೊಂಡಿದ್ದೇವೆ. ಮೊದಲು ನಮ್ಮ ಮನೆಯಿಂದಲೇ ಹೆಣ್ಣಿನ ಬಗ್ಗೆ ಇರುವ ತಪ್ಪು ಕಲ್ಪನೆ ದೂರವಾಗಬೇಕೆಂದು ಸಲಹೆ ನೀಡಿದರು.

ಇನ್ನರ್‌ವೀಲ್ ಕ್ಲಬ್‌ನ ಅಧ್ಯಕ್ಷೆ ಬಿಂಧ್ಯಾ ಶರತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ರೋಟರಿ ಕ್ಲಬ್ ಟೆಂಪಲ್‌ಟೌನ್‌ನ ಅಧ್ಯಕ್ಷ ಪೂರ್ಣಚಂದ್ರ ಜೈನ್ ಮಾತನಾಡಿ, ಲಿಂಗತ್ವಾಧಾರಿತ ದೌರ್ಜನ್ಯ ತಡೆ ಹಾಗೂ ಮಹಿಳಾ ಸಹಾಯವಾಣಿ ಬಹಳ ಅರ್ಥಪೂರ್ಣವಾದ ಕಾರ್ಯಕ್ರಮವಾಗಿದ್ದು, ಇದರ ಮಾಹಿತಿಯನ್ನು ಪ್ರತಿಯೊಬ್ಬರು ಪಡೆದುಕೊಂಡು ನಿಮ್ಮ ಸುತ್ತಮುತ್ತಲಿರುವ ಮಹಿಳೆಯರಿಗೆ ತಿಳಿಸಿದರೆ ಇನ್ನಷ್ಟು ಮಹಿಳೆಯರು ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಮಹಿಳಾ ಸಬಲೀಕರಣ ಇಲಾಖೆಯ ವಿಶಾಲಾಕ್ಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಡುಬಿದಿರೆ ವ್ಯಾಪ್ತಿಯ ಮೇಲ್ವಿಚಾರಕಿ ಶುಭ, ಪದಾಧಿಕಾರಿ ಸ್ವರ್ಣಲತಾ ಉಪಸ್ಥಿತರಿದ್ದರು. ಸಮುದಾಯ ಆರೋಗ್ಯ ಕೇಂದ್ರದ ಸಿಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಈ ಸಂದರ್ಭದಲ್ಲಿದ್ದರು.

ಆರೋಗ್ಯ ಕಾರ್ಯಕರ್ತೆ ವಿಜಯಾ ಪ್ರಾರ್ಥನೆಗೈದರು. ಆರೋಗ್ಯ ಕೇಂದ್ರದ ಆಡಳಿತಾ ವೈದ್ಯಾಧಿಕಾರಿ ಡಾ. ಅಕ್ಷತಾ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರಿಗೆ ಒಂದೇ ಸೂರಿನಡಿಯಲ್ಲಿ ಹಲವಾರು ಸೇವೆಗಳು ಲಭ್ಯವಾಗುವಂತಹ ಕೇಂದ್ರವೇ ಸಖಿ ಒನ್ ಸ್ಟಾಪ್ ಸೆಂಟರ್ ಎಂದರು.

ಹಿರಿಯ ಪ್ರಾಥಮಿಕ ಸುರಕ್ಷತಾಧಿಕಾರಿ ಶಾಂತಮ್ಮ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article