
ಫಿಲೋಮಿನಾ ಪ.ಪೂ ಕಾಲೇಜು: ವ್ಯಸನ ಮುಕ್ತ ಭಾರತ ಜಾಗೃತಿ ಕಾರ್ಯಕ್ರಮ
ಪುತ್ತೂರು: ಸಂತ ಫಿಲೋಮಿನಾ ಪ.ಪೂ. ಕಾಲೇಜಿನ ಮಾನವಿಕ ವಿಭಾಗ ಮತ್ತು ಪುತ್ತೂರಿನ ಪತ್ರಾವೋ ಆಸ್ಪತ್ರೆಯ ವ್ಯಸನ ಮುಕ್ತಿ ಕೇಂದ್ರದ ವತಿಯಿಂದ ಡಿ.14 ರಂದು ಕಾಲೇಜು ಸಭಾಂಗಣದಲ್ಲಿ ವ್ಯಸನ ಮುಕ್ತ ಭಾರತ ಜಾಗೃತಿ ಕಾರ್ಯಕ್ರಮ ನಡೆಯಿತು.
ಪುತ್ತೂರಿನ ಪತ್ರಾವೋ ಆಸ್ಪತ್ರೆಯ ವ್ಯಸನ ಮುಕ್ತಿ ಕೇಂದ್ರದ ಕೌನ್ಸಿಲರ್ ಆಗಿರುವ ಜೋನ್ಸನ್ ಅವರು ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ಬಗ್ಗೆ ಅರಿವು ಮೂಡಿಸುತ್ತಾ, ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ ಹದಗೆಡುವುದಲ್ಲದೆ ತಮ್ಮ ಜೀವಿತಾವಧಿಯ ಆಯಸ್ಸನ್ನು ಕಸಿದುಕೊಳ್ಳುತ್ತದೆ. ಆದ್ದರಿಂದ ದುರಾಭ್ಯಾಸಗಳಿಂದ ದೂರ ಉಳಿದು ಉತ್ತಮ ಜೀವನವನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.
ಮಕ್ಕಳು ಮಾದಕ ವ್ಯಸನದಿಂದ ದೂರ ಇರಬೇಕು. ತಮ್ಮ ಸುತ್ತಮುತ್ತ ಅಥವಾ ಕುಟುಂಬದಲ್ಲಿ ಯಾರಾದರೂ ಮಾದಕ ವ್ಯಸನಿಗಳು ಕಂಡು ಬಂದರೆ ಅದರ ದುಷ್ಪರಿಣಾಮವನ್ನು ಅವರಿಗೆ ತಿಳಿಸಿ ಮಾದಕ ವ್ಯಸನದಿಂದ ಮುಕ್ತ ಮಾಡಲು ಪ್ರಯತ್ನಿಸಬೇಕು ಎಂದರು.
ಪತ್ರಾವೋ ಆಸ್ಪತ್ರೆಯ ಸಿಬ್ಬಂದಿಯಾಗಿರುವ ಸುರೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶೋಕಿಗಾಗಿ ಹಾಗೂ ಕಷ್ಟಗಳನ್ನು ಮರೆಯಬಹುದು ಎಂಬ ನೆಪದಿಂದ, ಇನ್ನೂ ಕೆಲವರು ಸ್ನೇಹಿತರ ಒತ್ತಾಯಕ್ಕೆ ಹೀಗೆ ನಾನಾ ಕಾರಣಗಳಿಂದ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇಂತಹವರು ಕಂಡುಬಂದರೆ ಅವರ ಮನ ಪರಿವರ್ತನೆ ಮಾಡಿ ಮಾದಕ ವ್ಯಸನದಿಂದ ದೂರ ಮಾಡಬೇಕು. ಇದರಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯೊಂದಿಗೆ ಸಮಾಜಮುಖೀ ಕಾರ್ಯದಲ್ಲಿ ತೊಡಗಿದಂತಾಗುತ್ತದೆ ಎಂದರು.
ಪತ್ರಾವೋ ಆಸ್ಪತ್ರೆಯ ವ್ಯಸನ ಮುಕ್ತಿ ಕೇಂದ್ರದ ಕೌನ್ಸಿಲರ್ ಪ್ರೀತಾ ಅವರು ಮಾದಕ ದ್ರವ್ಯ ಮುಕ್ತ ಭಾರತಕ್ಕಾಗಿ ವಿದ್ಯಾರ್ಥಿಗಳಲ್ಲಿ ಪ್ರತಿಜ್ಞೆ ಮಾಡಿಸಿದರು.
ಮಾನವಿಕ ವಿಭಾಗದ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕರಾದ ಶರತ್ ಆಳ್ವ ಚನಿಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.