ಅಪಘಾತ: ಬೈಕ್ ಸವಾರ ಸಾವು
Thursday, December 19, 2024
ಪುತ್ತೂರು: ಬೈಕ್ ಮತ್ತು ಕೆಎಸ್ಸಾರ್ಟಿಸಿ ಬಸ್ಸಿನ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಬಕ ಸಮೀಪದ ಮುರ ಎಂಬಲ್ಲಿ ಗುರುವಾರ ಅಪರಾಹ್ನ ನಡೆದಿದೆ.
ಪುತ್ತೂರು ತಾಲೂಕಿನ ಪಡ್ನೂರು ನಿವಾಸಿ ಅಬ್ದುಲ್ ಕುಂಞಿ(65) ಮೃತಪಟ್ಟ ವ್ಯಕ್ತಿ. ಅವರು ತನ್ನ ಬೈಕ್‌ನಲ್ಲಿ ಔಷಧಿಗೆಂದು ಮುರದಲ್ಲಿರುವ ಮೆಡಿಕಲ್ ಒಂದಕ್ಕೆ ಆಗಮಿಸಿ ಔಷಧಿ ಪಡೆದುಕೊಂಡು ಹಿಂದಿರುಗಿ ಪಡ್ನೂರಿನತ್ತ ಪ್ರಯಾಣಿಸುತ್ತಿರುವಾಗ ಮುಂಭಾಗದಿಂದ ಆಗಮಿಸಿದ ಪುತ್ತೂರು-ಸ್ಟೇಟ್‌ಬ್ಯಾಂಕ್ ಸಂಚಾರದ ಕೆಎಸ್ಸಾರ್ಟಿಸಿ ಬಸ್ಸು ಮುಖಾಮುಖಿಯಾಗಿ ಡಿಕ್ಕಿಯಾಗಿತ್ತು. ಡಿಕ್ಕಿಯ ರಭಸಕ್ಕೆ ಬೈಕ್ ಬಸ್ಸಿನ ಮುಂಭಾಗದಲ್ಲಿ ಸಂಪೂರ್ಣ ಒಳನುಗ್ಗಿದೆ. ಈ ಸಂದರ್ಭದಲ್ಲಿ ರಸ್ತೆಗೆಸೆಯಲ್ಪಟ್ಟ ಅಬ್ದುಲ್ ಕುಂಞಿ ಅವರು ಗಂಭೀರ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಪುತ್ತೂರು ಸಂಚಾರಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.