ಡಿ.5 ರಂದು ಚೌತಿ ಕುಕ್ಕೆ ಸುಬ್ರಹ್ಮಣ್ಯನಿಗೆ ಹೂವಿನ ತೇರಿನ ಉತ್ಸವ

ಡಿ.5 ರಂದು ಚೌತಿ ಕುಕ್ಕೆ ಸುಬ್ರಹ್ಮಣ್ಯನಿಗೆ ಹೂವಿನ ತೇರಿನ ಉತ್ಸವ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಚೌತಿಯ ದಿನ ರಾತ್ರಿ ಕುಕ್ಕೆ ಸುಬ್ರಹ್ಮಣ್ಯ ದೇವರ ಹೂವಿನ ತೇರಿನ ಉತ್ಸವವು ನೆರವೇರಲಿದೆ. ಶ್ರೀ ದೇವರ ಮಹಾಪೂಜೆಯ ಬಳಿಕ ಹೊರಾಂಗಣದಲ್ಲಿ ಬಂಡಿ ಉತ್ಸವ ಹಾಗೂ ಪಾಲಕಿ ಉತ್ಸವ ನೆರವೇರಲಿದೆ.

ಬಳಿಕ ಈ ಮೊದಲು ಉತ್ತರಾದಿ ಮಠದಲ್ಲಿ ಮಯೂರ ವಾಹನ ಸುಬ್ರಹ್ಮಣ್ಯ ದೇವರಿಗೆ ಪೂಜೆ ನಡೆಯಲಿದೆ. ನಂತರ ಹೂವಿನ ತೇರಿನಲ್ಲಿ ಸುಬ್ರಹ್ಮಣ್ಯ ದೇವರು ಸಹೋದರ ಕಾಶಿಕಟ್ಟೆ ಮಹಾಗಣಪತಿಯ ಸನ್ನಿಧಿಗೆ ಆಗಮಿಸಿ ಸೋದರರ ಸಮಾಗಮ ನೆರವೇರಲಿದೆ. ಈ ಸಂದರ್ಭ ಕಾಶಿಕಟ್ಟೆ ಮಹಾಗಣಪತಿ ಸನ್ನಿಧಾನದಲ್ಲಿ ವಿಶೇಷ ಹೂ ಮತ್ತು ಹಣತೆಗಳ ಶೃಂಗಾರದ ನಡುವೆ ಮಹಾಗಣಪತಿಗೆ ರಂಗಪೂಜೆ ನಡೆಯಲಿದೆ. ಬಳಿಕ ವಾಸುಕಿ ಕಟ್ಟೆಯಲಿ, ಶಿವರಾತ್ರಿ ಕಟ್ಟೆಯಲ್ಲಿ ಮತ್ತು ಸವಾರಿ ಮಂಟಪದ ಸವಾರಿ ಕಟ್ಟೆಯಲ್ಲಿ ಕಟ್ಟೆಪೂಜೆ ನಡೆಯಲಿದೆ.ಅಲ್ಲದೆ ಇಂದಿನಿಂದ ಮೂರು ದಿನಗಳ ಕಾಲ ಶ್ರೀ ದೇವಳದ ಒಳಾಂಗಣದಲ್ಲಿ ಭಕ್ತರು ಸ್ವಯಂಪ್ರೇರಿತರಾಗಿ ಎಡೆಸ್ನಾನ ಸೇವೆ ನೆರವೇರಿಸಲಿದ್ದಾರೆ.ಈ ಮೂಲಕ ಎಡೆಸ್ನಾನ ಸೇವೆ ಆರಂಭಗೊಳ್ಳಲಿದೆ. 

ನಾಳೆಯಿಂದ ಸೇವೆಗಳಲ್ಲಿ ವ್ಯತ್ಯಯ:

ಚಂಪಾಷಷ್ಠಿ ದಿನ ಆಶ್ಲೇಷಾ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ನಡೆಯುವುದಿಲ್ಲ. ಚೌತಿ, ಪಂಚಮಿ ಮತ್ತು ಷಷ್ಠಿಯಂದು ಮಹಾಭಿಷೇಕ ಸೇವೆ ನಡೆಯುವುದಿಲ್ಲ.ಈ ದಿನಗಳಲ್ಲಿ ರಾತ್ರಿ ಪ್ರಾರ್ಥನೆ ಸೇವೆ ನೆರವೇರುವುದಿಲ್ಲ. ಪಂಚಮಿ ದಿನ ಮದ್ಯಾಹ್ನ ಮತ್ತು ರಾತ್ರಿ ಪ್ರಾರ್ಥನೆ ಇಲ್ಲ. ಷಷ್ಠಿ ದಿನ ಮಧ್ಯಾಹ್ನ ಪ್ರಾರ್ಥನೆ ಇಲ, ರಾತ್ರಿ ಪ್ರಾರ್ಥನೆ ಇದೆ.

ಶೇಷವಾಹನೋತ್ಸವ:

ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಶ್ರೀ ದೇವರ ಶೇಷವಾಹನೋತ್ಸವ ನೆರವೇರಿತು. ಮಹಾಪೂಜೆಯ ನಂತರ ದೇವರ ಹೊರಾಂಗಣ ಉತ್ಸವಗಳು ಆರಂಭವಾಯಿತು. ಆರಂಭದಲ್ಲಿ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ಉತ್ಸವ ನೆರವೇರಿತು. ಬಳಿಕ ವಿವಿಧ ಪುಷ್ಪಗಳಿಂದ ತುಂಬಿದ್ದ ಸಾಲಾಂಕೃತ ಪಾಲಕಿಯಲ್ಲಿ ಶ್ರೀ ದೇವರ ಪಾಲಕಿ ಉತ್ಸವ ನೆರವೇರಿತು. ಬಳಿಕ ಪಂಚಶಿಖರಗಳನ್ನು ಒಳಗೊಂಡ ಚಂದ್ರ ಮಂಡಲ ರಥದಲ್ಲಿ ಶ್ರೀ ದೇವರ ಶೇಷ ವಾಹನೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು. ನಂತರ ಸವಾರಿ ಮಂಟಪದಲ್ಲಿರುವ ಅವಲಕ್ಕಿ ಕಟ್ಟೆಯಲ್ಲಿ ಶ್ರೀ ದೇವರ ಕಟ್ಟೆಪೂಜೆ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article