
ನಾಳೆ 6.57ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಶ್ರೀ ದೇವರ ರಥಾರೋಹಣ, ಕುಕ್ಕೆಯಲ್ಲಿ ಚಂಪಾಷಷ್ಠಿ ಮಹಾರಥೋತ್ಸವ: ಸುವರ್ಣವೃಷ್ಠಿ, ಚಿಕ್ಕರಥೋತ್ಸವ
ಸುಬ್ರಹ್ಮಣ್ಯ: ಮಹಾತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಧಾನ ದಿನವಾದ ಕಾರ್ತಿಕ ಶುದ್ಧ ಷಷ್ಠಿಯ ದಿನವಾದ ಶನಿವಾರ ಪ್ರಾತಃಕಾಲ 6.57ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರು ಬ್ರಹ್ಮರಥಾರೋಹಣರಾಗಲಿದ್ದಾರೆ. ಅಲ್ಲದೆ ಚಿಕ್ಕ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾಗಲಿದ್ದಾರೆ.
ನಂತರ ಸುವರ್ಣ ವೃಷ್ಠಿಯಾಗಿ, ಚಿಕ್ಕ ರಥೋತ್ಸವ ನೆರವೇರಲಿದೆ. ಬಳಿಕ ಚಂಪಾಷಷ್ಠಿ ಮಹಾರಥೋತ್ಸವ ಜರುಗಲಿದೆ. ಬಳಿಕ ಷಷ್ಠಿ ಕಟ್ಟೆಯಲ್ಲಿ ಮತ್ತು ಒಳಾಂಗಣದ ಕಟ್ಟೆಯಲ್ಲಿ ಅವಳಿ ದೇವರಿಗೆ ಪೂಜೆ ನಡೆಯಲಿದೆ. ನಂತರ ಪ್ರಧಾನ ಅರ್ಚಕರು ಭಕ್ತರಿಗೆ ಮೂಲಮೃತ್ತಿಕಾ ಪ್ರಸಾದ ವಿತರಿಸಲಿದ್ದಾರೆ. ಬಳಿಕ ಮಹಾರಥೋತ್ಸವ ಸೇವೆ ನೆರವೇರಿಸಿದ ಭಕ್ತರಿಗೆ ಮಹಾಪ್ರಸಾದ ನೀಡಲಿದ್ದಾರೆ. ಬ್ರಹ್ಮರಥ ಎಳೆಯಲು ನೂಕು ನುಗ್ಗಲು ಉಂಟಾಗುವುದನ್ನು ತಪ್ಪಿಸಲು ಆಡಳಿತ ಮಂಡಳಿ ರಥ ಎಳೆಯಲು ಪಾಸ್‌ನ ವ್ಯವಸ್ಥೆ ಮಾಡಿದೆ.ಅಲ್ಲದೆ ಕಬ್ಬೀಣದ ಭದ್ತವಾದ ಗೇಟ್ ವ್ಯವಸ್ಥೆ ಮಾಡಲಾಗಿದೆ.
ಬೆತ್ತ ಶ್ರೀ ದೇವಳಕ್ಕೆ:
ಈ ಹಿಂದೆ ಬೆತ್ತವನ್ನು ಭಕ್ತರು ತುಂಡು ಮಾಡಿ ತಮ್ಮ ಮನೆಗಳಿಗೆ ಬಾರಿ ಪೈಪೋಟಿಯೊಂದಿಗೆ ಕೊಂಡೊಯ್ಯುತ್ತಿದ್ದರು. ಇದೀಗ ಬ್ರಹ್ಮ ರಥ ಎಳೆಯಲು ಉಪಯೋಗಿಸಿದ ಎಲ್ಲಾ ಬೆತ್ತವನ್ನು ಶ್ರೀ ದೇವಳವೇ ಉಪಯೋಗಿಸಲಿದೆ. ಬ್ರಹ್ಮರಥ ಎಳೆದ ಬೆತ್ತವು ಅಪೂರ್ವವಾದ ಸ್ಥಾನವನ್ನು ಪಡೆದಿದೆ. ಅಲ್ಲದೆ ದೇವಳದಲ್ಲಿ ನಡೆಯುವ ಸೇವೆಗಳಿಗೆ ಕೊಡುವ ಮಹಾಪ್ರಸಾದದಲ್ಲಿ ಬೆತ್ತದ ತುಂಡನ್ನು ನೀಡಲಾಗುತ್ತಿದೆ. ಇದೀಗ ಕ್ಷೇತ್ರದಲ್ಲಿ ದಾಖಲೆಯ ಸೇವೆಗಳು ನೆರವೇರುವುದರಿಂದ ಪ್ರಸಾದದಲ್ಲಿ ಉಪಯೋಗಿಸಲು ಬೆತ್ತ ಕಡಿಮೆಯಾಗಬಾರದು ಎಂಬ ಕಾರಣದಿಂದ ರಥ ಎಳೆದ ಎಲ್ಲಾ ಬೆತ್ತವನ್ನು ಶ್ರೀ ದೇವಳವೇ ಉಪಯೋಗಿಸಲಿದೆ.
ಭಕ್ತ ಸಂದೋಹ:
ಕುಕ್ಕೆ ಕ್ಷೇತ್ರದಲ್ಲಿ ಸ್ಕಂಧ ಪಂಚಮಿಯ ದಿನವಾದ ಶುಕ್ರವಾರ ಭಕ್ತ ಸಂದೋಹವೇ ನೆರೆದಿತ್ತು.ಕ್ಷೇತ್ರದ ತುಂಬೆಲ್ಲ ಭಕ್ತ ಸಾಗರವೇ ಕಂಡು ಬರುತ್ತಿತ್ತು. ರಥಬೀದಿ, ಒಳಾಂಗಣ, ಆದಿಸುಬ್ರಹ್ಮಣ್ಯ, ಪ್ರಧಾನ ವೃತ್ತದಿಂದ ಕಾಶಿಕಟ್ಟೆ ತನಕ ಭಕ್ತರ ದಂಡು ಕಂಡು ಬಂದಿತ್ತು.ಭಕ್ತರ ಅನುಕೂಲತೆಗಾಗಿ ಷಣ್ಮುಖ ಪ್ರಸಾದ ಬೋಜನಶಾಲೆಯೊಂದಿಗೆ, ಅಂಗಡಿಗುಡ್ಡೆಯಲ್ಲಿ ವಿಶೇಷ ಅನ್ನಸತ್ರ ಅನ್ನಪೂರ್ಣ, ಆದಿ ಸುಬ್ರಹ್ಮಣ್ಯ ಬೋಜನ ಶಾಲೆಯಲ್ಲಿ ವಿಶೇಷ ಬೋಜನ ವ್ಯವಸ್ಥೆ ಮಾಡಿರುವುದರಿಂದ ಆಗಮಿಸಿದ ಸಹಸ್ರಾರು ಜನರು ಹೆಚ್ಚಿನ ಒತ್ತಡ ಇಲ್ಲದ ಶ್ರೀ ದೇವರ ಪ್ರಸಾದ ಬೋಜನ ಸ್ವೀಕರಿಸಲು ಅನುಕೂಲವಾಯಿತು.