ಕುಕ್ಕೆ: ಸಂಪ್ರದಾಯದಂತೆ ಕುಮಾರಪಾದಕ್ಕೆ ಪೂಜೆ
Sunday, December 22, 2024
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಪರ್ವತದ ತುತ್ತ ತುದಿಯಲ್ಲಿರುವ ಕುಮಾರ ಪಾದಕ್ಕೆ ಮತ್ತು ಸಮೀಪದಲ್ಲಿರುವ ವಾಸುಕಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸಂಪ್ರದಾಯ ಪ್ರಕಾರ ಶನಿವಾರ ಪೂಜೆ ನೆರವೇರಿಸಲಾಯಿತು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಸೀತಾರಾಮ ಯಡಪಡಿತ್ತಾಯ ಅವರು ಪೂರ್ವಶಿಷ್ಟ ಸಂಪ್ರದಾಯದ ಪ್ರಕಾರ ಮಾರ್ಗಶಿರ ಬಹುಳ ಷಷ್ಠಿಯ ದಿನವಾದ ಶನಿವಾರ ಪಂಚಾಮೃತ ಅಭಿಷೇಕ ನೆರವೇರಿಸಿ ಪೂಜೆ ನೆರವೇರಿಸಿದರು. ಬಳಿಕ ಭಕ್ತರಿಗೆ ಪ್ರಸಾದ ನೀಡಲಾಯಿತು.
ಕುಕ್ಕೆಯಿಂದ ಸುಮಾರು 12 ಕಿ.ಮೀ. ದೂರವಿರುವ ಎತ್ತರದ ಪರ್ವತ ಏರಿ ಪೂಜೆಯಲ್ಲಿ ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ವರ್ಷಕ್ಕೊಂದು ಬಾರಿ ಮಾತ್ರವೇ ಇಲ್ಲಿ ದೇವಸ್ಥಾನದ ವತಿಯಿಂದ ಪೂಜೆ ನೆರವೇರಿಸಲಾಗುತ್ತದೆ.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು, ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.