
ಬಿಜೆಪಿ ಗ್ಯಾರಂಟಿ ಯೋಜನೆಗಳನ್ನು ತ್ಯಜಿಸಿ ಬದ್ಧತೆ ತೋರಲಿ
ಕಾರ್ಕಳ: ಬಿಜೆಪಿಯವರು ಗೃಹಲಕ್ಷ್ಮೀ, ಗೃಹಜ್ಯೋತಿ ಮೊದಲಾದ ಗ್ಯಾರಂಟಿ ಯೋಜನೆಗಳನ್ನು ತ್ಯಜಿಸಿ ಬದ್ಧತೆ ತೋರಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸವಾಲು ಎಸೆದರು.
ಅವರು ಮಾ. 3ರಂದು ಕಾರ್ಕಳ ಗಾಂಧಿಮೈದಾನದಲ್ಲಿ ನಡೆದ ಕಾಂಗ್ರೆಸ್ ಕುಟುಂಬೋತ್ಸವ, ಡಾ. ಎಂ. ವೀರಪ್ಪ ಮೊಯ್ಲಿ ಅವರಿಗೆ ಅಭಿನಂದನೆ, ಕಾಂಗ್ರೆಸ್ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಬಿಜೆಪಿಯವರು ಗ್ಯಾರಂಟಿ ಯೋಜನೆ ಕುರಿತು ಮಾತನಾಡುತ್ತಿದ್ದಾರೆ. ಅವರಿಗೆ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಬೇಡವೆಂದಾದರೆ ಘೋಷಣೆ ಮಾಡಬೇಕು ಎಂದರು.
ಮೊಯ್ಲಿಗೆ ಸನ್ಮಾನ:
ನಾನು ವೀರಪ್ಪ ಮೊಯ್ಲಿ ಅವರ ಶಿಷ್ಯ. ಇಂದು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ನಿಂತು ಅವರನ್ನೇ ಅಭಿನಂದಿಸುವ ಅವಕಾಶ ಒದಗಿದೆ. ಅವರನ್ನು ತುಂಬುಹೃದಯದಿಂದ ಸನ್ಮಾನಿಸಿದರು.
ಸುನಿಲ್ ಕುಮಾರ್ ತನಗೆ ಸ್ವಾಗತ ಕೋರಿ ಮಾಡಿರುವ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್ ಮೊದಲು ಸುನಿಲ್ ಕುಮಾರ್ ಅವರು ಬಿಜೆಪಿಯಲ್ಲಿನ ಗೊಂದಲಗಳನ್ನು ಸರಿಪಡಿಸಲಿ. ಅವರು ತಮ್ಮ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಲು ಯಾಕೆ ಮುಂದಾಗಿದ್ದಾರೆ ಎಂಬುದನ್ನು ಕ್ಷೇತ್ರದ ಜನತೆಗೆ ತಿಳಿಸಲಿ ಎಂದ ಅವರು ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಹೊತ್ತ ಮಹಿಳೆ ಹೊಲದಲ್ಲಿದ್ದರೆ ಚಂದ. ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚಂದ ಎಂದು ಡಿ.ಕೆ. ಶಿವಕುಮಾರ್ ಮಾರ್ಮಿಕವಾಗಿ ನುಡಿದರು.
ಶಾಸಕರಾಗಿ 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ, ಡಿಕೆಶಿಯವರು ಎಂಎಲ್‌ಎ ಆಗಬೇಕೆಂದು ಮೊದಲು ಟಿಕೆಟ್ ಕೊಡಿಸಿದವ ನಾನು. ಇಂದು ಅವರು ರಾಜ್ಯದ ಉಪಮುಖ್ಯಮಂತ್ರಿಯಾಗಿರುವುದು ಹೆಮ್ಮೆಯ ವಿಷಯ. ಡಿ.ಕೆ. ಶಿವಕುಮಾರ್ ಉತ್ತಮ ನಾಯಕತ್ವದೊಂದಿಗೆ ಪಕ್ಷ ಸಂಘಟನೆಗೆ ವಿಶೇಷ ಆದ್ಯತೆ ನೀಡಿದ್ದಾರೆ. ಹೇಳಿಕೆಗಳು ಬರುತ್ತವೆ. ಹೋಗುತ್ತವೆ. ಆದರೆ, ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಟೀಕೆ ಮಾಡುವವರಿದ್ದರೆ ಅವರ ವೈಯಕ್ತಿಕ ತೃಪ್ತಿಗೆ ಮಾಡಬೇಕೇ ಹೊರತು ಮತ್ತೇನಲ್ಲ. ಡಿ.ಕೆ. ಅವರಿಗೆ ಮುಖ್ಯಮಂತ್ರಿ ಪದವಿ ವರ ಅಲ್ಲ. ಅವರು ಸಂಪಾದನೆ ಮಾಡಿಕೊಂಡು ಬಂದಿರುವ ಶಕ್ತಿ. ಕಾರ್ಕಳದ ಪುಣ್ಯ ಭೂಮಿಯಲ್ಲಿ ಹೇಳುತ್ತಿದ್ಧೇನೆ. ಮುಖ್ಯಮಂತ್ರಿ ವಿಚಾರವಾಗಿ ನೀವೇನೂ ಪ್ರತಿಯಿಸಬೇಡಿ. ಜನ ತೀರ್ಮಾನ ಮಾಡಿ ಆಗಿದೆ ಇಟ್ ಈಸ್ ಸೆಟ್ಲ್‌ಡ್ ಮ್ಯಾಟರ್ ಎಂದರು.
ಶಿಕ್ಷಣ ನೀಡುವಲ್ಲಿ, ಬಡತನ ನಿರ್ಮೂಲನೆಗಾಗಿ ಕಾಂಗ್ರೆಸ್ ಪಕ್ಷ ಕಾರ್ಯನಿರ್ವಹಿಸಿದ್ದು, ಅದಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿ ಮಾಡಿದೆ. ಆದರೆ, ಈಗ ದೇಶ ಬಡತನದತ್ತ ಸಾಗುತ್ತಿದೆ. ಆದರೆ, ಮೋದಿಯವರು ಹೊರಗೆ ಶೃಂಗಾರ. ಒಳಗೆ ಗೋಳಿ ಸೊಪ್ಪು ಅನ್ನುವಂತಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದರು.
ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು ಮಾತನಾಡಿ, ಒಂದು ಕಾಲದಲ್ಲಿ ಉಡುಪಿ, ದ.ಕ. ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು. ಇದೀಗ ಇವೆರಡು ಜಿಲ್ಲೆಗಳು ನಮ್ಮ ಕೈಯಲ್ಲಿ ಇಲ್ಲ. ಡಿ.ಕೆ. ಶಿವಕುಮಾರ್ ಭೇಟಿಯಿಂದ ಇಲ್ಲಿ ಮತ್ತೊಮ್ಮೆ ನಮ್ಮ ಅಸ್ತಿತ್ವವನ್ನು ಮರುಸ್ಥಾಪಿಸುವ ಕಾರ್ಯವಾಗಲಿ ಎಂದರು.
ಮಲೆನಾಡು ಮತ್ತು ಕರಾವಳಿಯನ್ನು ಸಂಪರ್ಕಿಸುವ ಆಗುಂಬೆ, ಶಿರಾಡಿ, ಚಾರ್ಮಾಡಿ ಘಾಟಿ ರಸ್ತೆ ಅಭಿವೃದ್ಧಿ, ಗ್ರಾಮೀಣ ರಸ್ತೆ ಉನ್ನತೀಕರಣ ನಿಟ್ಟಿನಲ್ಲಿ ಡಿಕೆಶಿಯವರಿಗೆ ಮನವಿ ಮಾಡಿಕೊಂಡ ಉದಯ ಕುಮಾರ್ ಶೆಟ್ಟಿ ಇದಕ್ಕೆ ಅನುದಾನ ಒದಗಿಸಲು ದೇವಲೋಕದಿಂದ ಸೈನ್ ಆಗಬೇಕಂತಿಲ್ಲ. ಇದಕ್ಕೆ ಭೂಲೋಕದಲ್ಲಿ ಸೈನ್ ಆಗಬೇಕಿದೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸುಧೀರ್ ಕುಮಾರ್ ಮರೋಳಿ ಮಾತನಾಡಿ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರಿಗೆ ಕುಹಕದ ಹೊರಗೆ ಬದುಕಲು ಸಾಧ್ಯವಿಲ್ಲ. ರಾಜ್ಯದ ಉಪಮುಖ್ಯಮಂತ್ರಿಯನ್ನು ಸ್ವಾಗತ ಮಾಡುವಾಗಲೂ ಕುಹಕ. ಹಿಂದುತ್ವದ ನಾಡಿಗೆ ಸ್ವಾಗತ ಎಂದು ಪೋಸ್ಟ್ ಮಾಡಿರುವ ಮಿಸ್ಟರ್ ಸುನಿಲ್ ಕುಮಾರ್ ಅವಿಭಜಿತ ದ.ಕ. ಜಿಲ್ಲೆಗೆ ಆಗಮಿಸಲು ನಿಮ್ಮ ಸರ್ಟಿಪಿಕೇಟ್ ಬೇಕಾಗಿಲ್ಲ ಎಂದರು.
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಂಸದರಾದ ವಿನಯ ಕುಮಾರ್ ಸೊರಕೆ, ಜಯಪ್ರಕಾಶ್ ಹೆಗ್ಡೆ, ಕೆಪಿಸಿಸಿ ಸದಸ್ಯ ಪದ್ಮರಾಜ್, ಮಾಜಿ ಸಚಿವರಾದ ಅಭಯಚಂದ್ರ ಜೈನ್, ರಮಾನಾಥ ರೈ, ಕಾಂಗ್ರೆಸ್ ಮುಖಂಡರಾದ ಐವಾನ್ ಡಿಸೋಜಾ, ಮಂಜುನಾಥ್ ಪೂಜಾರಿ ಮುದ್ರಾಡಿ, ಎಂ.ಎ. ಗಫೂರ್, ಮಿಥುನ್ ರೈ, ರಾಜು ಪೂಜಾರಿ, ಪ್ರಸಾದ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಸ್ವಾಗತಿಸಿ, ಸಾಹಿಲ್ ರೈ ಕಾರ್ಯಕ್ರಮ ನಿರೂಪಿಸಿದರು.