.jpeg)
ಅಲ್ಪಸಂಖ್ಯಾತರ ಓಲೈಕೆ ಸಿದ್ದರಾಮಯ್ಯ ಬಜೆಟ್: ಸತೀಶ್ ಕುಂಪಲ
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ರಾಜ್ಯದ ಜನತೆಯ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ನಿಖರವಾದ ಯೋಜನೆಗಳ ಘೋಷಣೆ ಮಾಡದೆ, ಅವುಗಳ ಅನುದಾನ ಕುರಿತು ಸ್ಪಷ್ಟತೆ ನೀಡದೆ, ಕೇವಲ ಆಕರ್ಷಕ ಘೋಷಣೆಗಳ ಮೂಲಕ ಜನರನ್ನು ಮೋಸಗೊಳಿಸುವ ಪ್ರಯತ್ನ ಮಾಡಿದ್ದಾರೆ.
ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ತೃಪ್ತಿಪಡಿಸಲು ಹೆಚ್ಚಿನ ಒತ್ತನ್ನು ನೀಡಿದರೂ, ಶಿಕ್ಷಣ, ಕೈಗಾರಿಕೆ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಸೂಕ್ತ ಅನುದಾನ ನೀಡಿಲ್ಲ. ಉದ್ಯೋಗ ಸೃಷ್ಟಿಗೆ ಬೇಕಾದ ಕೈಗಾರಿಕಾ ಬೆಂಬಲವಿಲ್ಲದೆ, ರೈತರ ನಿರೀಕ್ಷೆಗಳನ್ನು ಸಂಪೂರ್ಣ ನಿರಾಸೆಗೆ ತಳ್ಳಲಾಗಿದೆ.
ಈ ಬಜೆಟ್ ಕೇವಲ ಕಾಗದದ ಮೇಲಷ್ಟೇ ಸೀಮಿತವಾಗುವ ಸಾಧ್ಯತೆ ಇದೆ. ಹಿಂದೆ ಘೋಷಿಸಿದ ಯೋಜನೆಗಳು ಹೇಗೆ ಕಾರ್ಯಗತವಾಗಲಿಲ್ಲವೋ, ಈ ಬಾರಿಯ ಬಜೆಟ್ಗೂ ಅದೇ ಸ್ಥಿತಿ ಉಂಟಾಗಬಹುದು. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಸಮರ್ಪಿತ ಯೋಜನೆಗಳಿಲ್ಲದೆ, ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಲು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲಾಗಿದೆ. ಹೊಸ ಯೋಜನೆಗಳ ಅಸ್ತಿತ್ವ ಮತ್ತು ಹಣಕಾಸು ವ್ಯವಸ್ಥೆಯ ಕುರಿತು ಯಾವುದೇ ಸ್ಪಷ್ಟತೆ ನೀಡದೆ, ಕೇವಲ ಜನರ ದೋಷಗಳನ್ನು ಮುಚ್ಚಿಹಾಕುವ ಬಜೆಟ್ ಇದಾಗಿದೆ.
ಕರಾವಳಿ ಭಾಗದ ಜಿಲ್ಲೆಗಳಿಗಂತೂ ಯಾವುದೇ ವಿಶೇಷ ಅನುದಾನ ನೀಡಲಾಗಿಲ್ಲ.ಮೀನುಗಾರಿಕಾ ವಲಯದ ಸಹಾಯ, ಪ್ರವಾಸೋದ್ಯಮ ಉತ್ತೇಜನದ ಕೊರತೆಯಿಂದ ಈ ಭಾಗದ ಜನತೆ ನಿರಾಸೆಯಾಗಿದ್ದಾರೆ. ಉದ್ದಿಮೆ, ಬಂಡವಾಳ ಹೂಡಿಕೆ, ಆರೋಗ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಬೇಕಾದ ಯೋಜನೆಗಳ ಅಭಾವದಿಂದ ಕರಾವಳಿ ಭಾಗ ಸಂಪೂರ್ಣ ನಿರ್ಲಕ್ಷ್ಯಗೊಂಡಿದೆ ಎಂದು ಸತೀಶ್ ಕುಂಪಲ ಬಜೆಟ್ ಅನ್ನು ಟೀಕಿಸಿದ್ದಾರೆ.