ಬಡವರ ವಸತಿ ಯೋಜನೆಯ ಬಗ್ಗೆ ಎಳ್ಳಷ್ಟೂ ಧ್ವನಿ ಎತ್ತದ ವೇದವ್ಯಾಸ ಕಾಮತ್ ಕೂಡಲೇ ರಾಜೀನಾಮೆ ನೀಡಲಿ: ಸುನಿಲ್ ಕುಮಾರ್ ಬಜಾಲ್

ಬಡವರ ವಸತಿ ಯೋಜನೆಯ ಬಗ್ಗೆ ಎಳ್ಳಷ್ಟೂ ಧ್ವನಿ ಎತ್ತದ ವೇದವ್ಯಾಸ ಕಾಮತ್ ಕೂಡಲೇ ರಾಜೀನಾಮೆ ನೀಡಲಿ: ಸುನಿಲ್ ಕುಮಾರ್ ಬಜಾಲ್


ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದು 40 ವರ್ಷಗಳು ಕಳೆದರೂ, ದೀರ್ಘ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಹಾಗೂ ಬಿಜೆಪಿ ಇಲ್ಲಿಯವರೆಗೆ ಒಂದೇ ಒಂದು ತುಂಡು ಭೂಮಿಯನ್ನು ಬಡವರಿಗೆ ನೀಡಿಲ್ಲ. ಕಳೆದ 25 ವರ್ಷಗಳಿಂದ ನಿವೇಶನರಹಿತರ ಹೋರಾಟ ನಡೆದ ಫಲವಾಗಿ ನಿವೇಶನ ರಹಿತರ ಪಟ್ಟಿ ರೆಡಿಯಾಗಿದ್ದರೂ, ಒಂದೆರಡು ಕಡೆಗಳಲ್ಲಿ ಭೂಮಿ ನಿಗದಿಪಡಿಸಿದ್ದರೂ ಅದನ್ನು ಇಲ್ಲಿನ ಬಿಲ್ಡರ್ ಮಾಫಿಯಾ ಯಾವುದಕ್ಕೂ ಅವಕಾಶವನ್ನೇ ನೀಡದೆ ಬಡವರನ್ನು ಮತ್ತಷ್ಟು ಬಡವರನ್ನಾಗಿಸುವ ಸಂಚು ನಡೆಸುತ್ತಲೇ ಇದೆ.ಈಗ ಮತ್ತೆ ಬಡವರಿಗೆ ಮನೆ ನಿವೇಶನ ಒದಗಿಸುವುದಾಗಿ ಜನತೆಯ ತೆರಿಗೆಯ ನೂರಾರು ಕೋಟಿ ರೂ.ಗಳನ್ನು ಖದೀಮ ಬಿಲ್ಡರ್ ಗಳ ಕೈಗೊಪ್ಪಿಸಿ ಅವರ ನಿರುಪಯೋಗಿ ಭೂಮಿಯನ್ನು TDR ಹೆಸರಲ್ಲಿ ಖರೀದಿಸಿ ಮತ್ತೆ ಬಡವರಿಗೆ ಮೊಸ ಮಾಡಿದ ಬಿಜೆಪಿ ದುರಾಡಳಿತದ ವಿರುದ್ಧ ನಿವೇಶನರಹಿತರು ಪ್ರಬಲ ಧ್ವನಿ ಎತ್ತಲು ಮುಂದಾಗಬೇಕು ಹಾಗೂ ಇದಕ್ಕೆಲ್ಲ ನೇರ ಕಾರಣೀಕರ್ತರೂ, ಬಡವರ ವಸತಿ ಯೋಜನೆಯ ಬಗ್ಗೆ ಎಳ್ಳಷ್ಟೂ ಮಾತನಾಡದ ಶಾಸಕ ವೇದವ್ಯಾಸ ಕಾಮತರವರು ಕೂಡಲೇ ರಾಜೀನಾಮೆಯನ್ನು ನೀಡಬೇಕೆಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಅವರು ಆಗ್ರಹಿಸಿದರು.


ನಿವೇಶನರಹಿತರಿಗೆ ನಿವೇಶನ ಮಂಜೂರು ಮಾಡಲು ಒತ್ತಾಯಿಸಿ ಹಾಗೂ ಇಡ್ಯಾ ಪ್ರದೇಶದಲ್ಲಿ G+3 ಮಾದರಿಯ ಯೋಜಿತ ವಸತಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ಒತ್ತಾಯಿಸಿ CPIM ಮಂಗಳೂರು ನಗರ ದಕ್ಷಿಣ ಹಾಗೂ ಉತ್ತರ ಸಮಿತಿಗಳ ಜಂಟಿ ನೇತ್ರತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯೆದುರು ನಡೆದ ಪ್ರತಿಭಟನೆಯನ್ನು ಉದ್ಘಾಟಿಸುತ್ತಾ ಈ ಮಾತುಗಳನ್ನು ಹೇಳಿದರು.


CPIM ಜಿಲ್ಲಾ ನಾಯಕರಾದ ಜೆ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಮಂಗಳೂರು ನಗರದಲ್ಲಿ ನಿವೇಶನ ರಹಿತರು ಬಾಡಿಗೆ ಕಟ್ಟಲು ಸಾಧ್ಯವಿಲ್ಲದೆ ಬದುಕಲು ಹರಸಾಹಸ ಪಡುವಂತಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಸತಿ ಯೋಜನೆಗಳು ಕೇವಲ ಪ್ರಚಾರಕ್ಕಾಗಿ ಮಾತ್ರ ಸೀಮಿತವಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ CPIM ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಅವರು, ಬಡಪಾಯಿ ನಿವೇಶನರಹಿತರನ್ನು ತನ್ನ ರಾಜಕೀಯ ಲಾಭಕ್ಕೆ ದುರುಪಯೋಗಪಡಿಸಿದ ಬಿಜೆಪಿ ಕಾಂಗ್ರೆಸ್ ಯಾವುದೇ ರೀತಿಯ ಸ್ಪಷ್ಟತೆಯನ್ನು ಹೊಂದಿಲ್ಲ. ಕನಿಷ್ಠ ಪಕ್ಷ ಮನಪಾ ಆಯುಕ್ತರನ್ನು ವಿಚಾರಿಸಲು ಭೇಟಿಯಾಗಲು ಬಂದರೆ ತೀರಾ ಉದ್ದಟತನದಿಂದ ವರ್ತಿಸಿದ್ದು ಮಾತ್ರವಲ್ಲದೆ ಮಂಗಳೂರಿನ ಬಡ ನಿವೇಶನರಹಿತರ ಬಗ್ಗೆ ಅತ್ಯಂತ ಅವಮಾನಕಾರಿಯಾಗಿ ಮಾತನಾಡಿರುವುದು ತೀರಾ ಖಂಡನೀಯವಾಗಿದೆ ಎಂದು ಹೇಳಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಮಾತನಾಡಿದರು.

ಪ್ರತಿಭಟನೆಯಲ್ಲಿ CPIM ಜಿಲ್ಲಾ ನಾಯಕರಾದ ಸಂತೋಷ್ ಬಜಾಲ್,ಕ್ರಷ್ಣಪ್ಪ ಕೊಂಚಾಡಿ, ಜಯಂತಿ ಶೆಟ್ಟಿ, ಮನೋಜ್ ವಾಮಂಜೂರು, ಮಂಗಳೂರು ನಗರ ಮುಖಂಡರಾದ ಪ್ರಮೀಳಾ ಶಕ್ತಿನಗರ, ದಿನೇಶ್ ಶೆಟ್ಟಿ,ಶಶಿಧರ್ ಶಕ್ತಿನಗರ, ರವಿಚಂದ್ರ ಕೊಂಚಾಡಿ,ಭಾರತಿ ಬೊಳಾರ, ಲೋಕೇಶ್ ಎಂ, ನಾಗೇಶ್ ಕೋಟ್ಯಾನ್ ಹಾಗೂ ವಿವಿಧ ಸಂಘಟನೆಗಳ ಮುಖಂಡರಾದ ರಶ್ಮಿ ವಾಮಂಜೂರು, ಜಯಲಕ್ಷ್ಮಿ, ಅಸುಂತ ಡಿಸೋಜ,ತಯ್ಯೂಬ್ ಬೆಂಗರೆ,ಅಶೋಕ್ ಶ್ರೀಯಾನ್, ಜಯಪ್ರಕಾಶ್ ಜಲ್ಲಿಗುಡ್ಡ,ಪ್ರಶಾಂತ್ ಕುದ್ಕೋರಿಗುಡ್ಡ ಮುಂತಾದವರು ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article