
ಮಂಗಳೂರು ವಿವಿ ಅಂತರ್ ಕಾಲೇಜು ಭಾರ ಎತ್ತುವಿಕೆ ಸ್ಪರ್ಧೆಯಲ್ಲಿ ಮಿಂಚಿದ ಫಿಲೋಮಿನಾದ ವಿದ್ಯಾರ್ಥಿಗಳು
ಪುತ್ತೂರು: ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ಮಂಗಳೂರು ವಿವಿ ಮಟ್ಟದ ಅಂತರ ಕಾಲೇಜು ಭಾರ ಎತ್ತುವಿಕೆ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ ವಿದ್ಯಾರ್ಥಿಗಳು ಹಲವು ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ವಿಶೇಷ ಸಾಧನೆಯನ್ನು ಮಾಡಿದ್ದಾರೆ.
ದ್ವಿತೀಯ ಬಿಎಸ್‌ಸಿಯ ಸ್ಪಂದನ 45 ಕೆ.ಜಿ. ವಿಭಾಗದಲ್ಲಿ ಚಿನ್ನ, ದ್ವಿತೀಯ ಬಿಎಸ್‌ಸಿಯ ಶಿವಾನಿ ಮಾಚಯ್ಯ 49 ಕೆ.ಜಿ. ವಿಭಾಗದಲ್ಲಿ ಬೆಳ್ಳಿ, ಪ್ರಥಮ ಬಿಎಸ್‌ಸಿಯ ಚೈತ್ರಿಕಾ ಕಂಚು, ಪ್ರಥಮ ಬಿಎಸ್‌ಸಿಯ ದೃಶ್ಯ 55 ಕೆ.ಜಿ. ವಿಭಾಗದಲ್ಲಿ ಬೆಳ್ಳಿ, ದ್ವಿತೀಯ ಎಂ.ಕಾಂ.ನ ಬ್ಯೂಲಾ 64 ಕೆ.ಜಿ. ವಿಭಾಗದಲ್ಲಿ ಚಿನ್ನ, ದ್ವಿತೀಯ ಬಿಸಿಎಯ ವರ್ಷಾ 71 ಕೆ.ಜಿ. ವಿಭಾಗದಲ್ಲಿ ಕಂಚು, ಪ್ರಥಮ ಬಿಸಿಎಯ ಚಮಿಷಾ 74 ಕೆ.ಜಿ. ವಿಭಾಗದಲ್ಲಿ ಕಂಚು ಮತ್ತು 87+ ಕೆಜಿ ವಿಭಾಗದಲ್ಲಿ ಪ್ರಥಮ ಬಿ.ಕಾಂ. ಪೃಥ್ವಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಮಹಿಳೆಯರ ವಿಭಾಗದಲ್ಲಿ ರನ್ನರ‍್ಸ್ ಅಪ್ ಟ್ರೋಫಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಕಲಾ ವಿಭಾಗದ ರಂಜಿತ್ ಕುಮಾರ್ 109 ಕೆ.ಜಿ. ವಿಭಾಗದಲ್ಲಿ ಚಿನ್ನ, ತೃತೀಯ ಬಿ.ಕಾಂ.ನ ಶಬರೀಶ್ ರೈ 89 ಕೆ.ಜಿ. ವಿಭಾಗದಲ್ಲಿ ಚಿನ್ನ ಹಾಗೂ ತೃತೀಯ ಬಿ.ಕಾಂ.ನ ಯತೀಶ್ ಬೆಳ್ಳಿ.ಪದಕವನ್ನು ಗೆದ್ದು ವಿವಿ ಮಟ್ಟದಲ್ಲಿ ಪುರುಷರ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಕಾಲೇಜಿನ ಸಂಚಾಲಕರಾದ ರೆ. ಫಾ. ಲಾರೆನ್ಸ್ ಮಸ್ಕರೇನ್ಹಸ್ ಮತ್ತು ಪ್ರಾಂಶುಪಾಲರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ, ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದದವರು ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎಲಿಯಾಸ್ ಪಿಂಟೋ ಅವರನ್ನು ಕ್ರೀಡಾಪಟುಗಳನ್ನು ಬೆಳೆಸುವಲ್ಲಿ ನೀಡಿರುವ ಮಾರ್ಗದರ್ಶನ ಮತ್ತು ಬೆಂಬಲಕ್ಕಾಗಿ ಶ್ಲಾಘಿಸಿದ್ದಾರೆ.