
ಕುಂಪಲ-ಬಗಂಬಿಲ ಪ್ರಮುಖ ರಸ್ತೆಯ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಲು CPIM ಒತ್ತಾಯ
ಉಳ್ಳಾಲ: ಉಳ್ಳಾಲ ತಾಲೂಕಿನ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕುಂಪಲ-ಬಗಂಬಿಲ ಪ್ರಮುಖ ರಸ್ತೆಯ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಲು ಒತ್ತಾಯಿಸಿ CPIMನ ಉನ್ನತ ಮಟ್ಟದ ನಿಯೋಗವೊಂದು ಸೋಮೇಶ್ವರ ಪುರಸಭಾ ಮುಖ್ಯಾಧಿಕಾರಿಗಳನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಲಾಯಿತು.
ಕುಂಪಲ ಪ್ರದೇಶವು ಸಾವಿರಾರು ಜನವಸತಿ ಇರುವ ಊರಾಗಿದೆ. ಇಲ್ಲಿ ಬಹುತೇಕ ದುಡಿಯುವ ವರ್ಗದ ಜನರೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಇವರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ, ರೋಗಿಗಳು ಆಸ್ಪತ್ರೆಗಳಿಗೆ ತೆರಳಲು ಕುಂಪಲದಿಂದ ಬಗಂಬಿಲಕ್ಕೆ ಸಂಪರ್ಕ ಸಾಧಿಸುವ ಈ ಪ್ರಮುಖ ರಸ್ತೆಯನ್ನೇ ಆಶ್ರಯಿಸುತ್ತಿದ್ದಾರೆ. ಕುಡಿಯುವ ನೀರಿನ ಪೈಪ್ ಅಳವಡಿಸುವ ಕಾಮಗಾರಿಯಿಂದಾಗಿ ಈ ಪ್ರಮುಖ ರಸ್ತೆಯು ಸಂಪೂರ್ಣ ಹದಗಿಟ್ಟಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡು ಸ್ಥಳೀಯ 4 ಖಾಸಗಿ ಬಸ್‌ಗಳು ಹಾಗೂ ಒಂದು ಸರಕಾರಿ ಬಸುಗಳು ಈ ರಸ್ತೆಯಲ್ಲಿ ಸಾಗಲು ಹಿಂದೇಟು ಹಾಕುತ್ತಿದೆ.ಈ ಬಸ್ ಗಳು RTO ನಿಗದಿಪಡಿಸಿದ ಸಮಯವನ್ನೇ ಉಲ್ಲಂಘಿಸಿ ತನ್ನ ಮನಸಿಗೆ ಬಂದಂತೆ ಓಡಾಡುತ್ತಿದ್ದು ಬೆಳಿಗ್ಗೆ ಹಾಗೂ ಸಂಜೆ ಒಂದೆರಡು ಟ್ರಿಪ್ ಗಳನ್ನು ನಡೆಸಿ ಬಳಿಕ ದಿನಪೂರ್ತಿ ಬಸ್ ಗಳಿಲ್ಲದೆ ಊರಿನ ಜನತೆ ಪರದಾಡುವಂತಾಗಿದೆ. ಕಾರಣ ಕೇಳಿದರೆ ಪ್ರಾರಂಭದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ ಎಂದಾದರೆ, ಪ್ರಸ್ತುತ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ, ವಾಹನ ಸಂಚರಿಸಲು ಸಾಧ್ಯವಿಲ್ಲ ಎಂಬ ಸಬೂಬನ್ನು ನೀಡಲಾಗುತ್ತಿದೆ ಎಂದು CPIM ಆರೋಪಿಸಿದೆ.
ಅವ್ಯವಸ್ಥೆಗಳ ಆಗರವಾಗಿರುವ ಕುಂಪಲ ಬಗಂಬಿಲ ಪ್ರಮುಖ ರಸ್ತೆಯನ್ನು ಕೂಡಲೇ ಡಾಮರೀಕರಣ ಗೊಳಿಸಬೇಕೆಂದು ಆ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು CPIM ಕುಂಪಲ ಶಾಖೆಯು ಸೋಮೇಶ್ವರ ಪುರಸಭಾ ಆಡಳಿತವನ್ನು ಒತ್ತಾಯಿಸುತ್ತದೆ.
ನಿಯೋಗದಲ್ಲಿ CPIM ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಉಳ್ಳಾಲ ವಲಯ ಮುಖಂಡರಾದ ಸುಂದರ ಕುಂಪಲ, ಪ್ರಮೋದಿನಿ, ಸ್ಥಳೀಯ ಶಾಖಾ ಕಾರ್ಯದರ್ಶಿ ಪದ್ಮನಾಭ ಕುಂಪಲ ಉಪಸ್ಥಿತರಿದ್ದರು.