
ಶ್ರೀ ರಾಮ ಲಕ್ಷ್ಮಣ ಅಲಂಕೃತ ಶೋಭಾಯಾತ್ರಾ
ಮಂಗಳೂರು: ನಗರದ ಕೋಡಿಯಲಬೈಲ್ ಪಿವಿಎಸ್ ಕಲಾಕುಂಜ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಸ್ಕಾನ್ ಮಂಗಳೂರು ಶ್ರೀಕೃಷ್ಣ ಬಲರಾಮ ಮಂದಿರ ವತಿಯಿಂದ ಏ.6 ರಂದು ಸಂಜೆ 4.30 ಗಂಟೆಗೆ ಶ್ರೀ ರಾಮನವಮಿ ಮತ್ತು ಶ್ರೀ ರಾಮ ಲಕ್ಷ್ಮಣ ಅಲಂಕೃತ ಶೋಭಾಯಾತ್ರಾ ಮಹೋತ್ಸವ ಆಯೋಜಿಸಲಾಗಿದೆ.
ಈ ಹಬ್ಬವನ್ನು ಇಸ್ಕಾನ್ ದೇವಸ್ಥಾನದಿಂದ ಪ್ರಾರಂಭಿಸಿ ಶಾರದಾ ವಿದ್ಯಾಲಯ ಮೈದಾನದಲ್ಲಿ ಮುಂದುವರಿಸಲಾಗುತ್ತದೆ. ಶ್ರೀಕೃಷ್ಣ ಬಲರಾಮ ದೇವರಿಗೆ ರಾಮ ಲಕ್ಷ್ಮಣರ ಅಲಂಕಾರ ಮಾಡಿ ಶೋಭಾಯಾತ್ರೆ ನಡೆಸಲಾಗುವುದು. ಸಂಜೆ 4.30ಕ್ಕೆ ಇಸ್ಕಾನ್ ಮಂದಿರದಿಂದ ಶೋಭಾಯಾತ್ರೆ ಆರಂಭಗೊಳ್ಳಲಿದೆ ಎಂದು ಇಸ್ಕಾನ್ ಮಂಗಳೂರು ಅಧ್ಯಕ್ಷ ಗುಣಕರ ರಾಮದಾಸ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪವಿತ್ರರಥದಲ್ಲಿ ಶ್ರೀ ರಾಮ ಲಕ್ಷ್ಮಣ ವಿಗ್ರಹವನ್ನು ಅದ್ಭುತವಾಗಿ ಅಲಂಕರಿಸಿ ಶೋಭಾಯಾತ್ರೆ ನಡೆಸಲಾಗುವುದು. ರಥಯಾತ್ರೆ ಬೆಸಂಟ್ ಶಾಲೆ ರಸ್ತೆ, ಎಂ.ಜಿ.ರಸ್ತೆ, ಪಿವಿಎಸ್ ವೃತ್ತ, ನವಭಾರತ ವೃತ್ತ ರಸ್ತೆಗಳ ಮೂಲಕ ಸಾಗಿ ಶಾರದಾ ವಿದ್ಯಾಲಯ ತಲುಪಲಿದೆ. ರಾಮ, ಲಕ್ಷ್ಮಣ, ಸೀತಾ ಮತ್ತು ಹನುಮಾನ್ ವೇಷ ರೂಪದಲ್ಲಿ ಅಲಂಕರಿಸಿದ ಮಕ್ಕಳು ರಥಯಾತ್ರೆಗೆ ಮೆರುಗು ನೀಡಲಿದ್ದಾರೆ ಎಂದರು.
ಶಾರದಾ ವಿದ್ಯಾಲಯದ ಮೈದಾನದಲ್ಲಿ ಸಂಜೆ 5.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ನೃತ್ಯ, ಸಂಗೀತ, ನಾಟಕ ಮತ್ತು ಇತರ ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿವೆ.
ಸಂಜೆ 6ಕ್ಕೆ ಶ್ರೀರಾಮ, ಲಕ್ಷ್ಮಣ, ಸೀತಾ ಮಹಾ ಅಭಿಷೇಕ, ಸಂಜೆ 6.30ಕ್ಕೆ ಭಜನೆ, ಕೀರ್ತನೆ ಮತ್ತು ಇತರ ಧಾರ್ಮಿಕ ಪ್ರವಚನ ಕಾರ್ಯಕ್ರಮಗಳು ನೆರವೇರಲಿದೆ.
ಸಂಜೆ 7.30ಕ್ಕೆ ಮಹಾ ಮಂಗಳಾರತಿ, ದೇವರ ಆಶೀರ್ವಾದವನ್ನು ಪಡೆಯಲು ವಿಶೇಷ ಪ್ರಾರ್ಥನೆ ನಡೆಯಲಿದೆ. ಬಳಿಕ ಶೋಭಾಯಾತ್ರೆ ಇಸ್ಕಾನ್ ದೇವಸ್ಥಾನಕ್ಕೆ ಹಿಂತಿರುಗುತ್ತದೆ. ಈ ಸಂದರ್ಭದಲ್ಲಿ ಎಲ್ಲ ಭಕ್ತರಿಗೆ ಪ್ರಸಾದ ವಿತರಿಸಲಾಗುತ್ತದೆ ಎಂದು ವಿವರಿಸಿದರು.
ಇಸ್ಕಾನ್ ಮಂಗಳೂರು ಸಂಘಟನಾ ಕಾರ್ಯದರ್ಶಿ ಸುಂದರ ಗೌರದಾಸ, ದೇವಕಿ ತನಯದಾಸ, ಮಾಧ್ಯಮ ಸಲಹೆಗಾರ ಎಂ.ವಿ.ಮಲ್ಯ ಉಪಸ್ಥಿತರಿದ್ದರು.