
ಅಬಕಾರಿ ಉದ್ಯಮದ ಸಮಸ್ಯೆ: ಪ್ರತಿಭಟನೆ
ಮಂಗಳೂರು: ಇಂದು ಅಬಕಾರಿ ಉದ್ಯಮದ ಹಲವಾರು ಸಮಸ್ಯೆಗಳನ್ನು ಮುಂದಿರಿಸಿಕೊಂಡು ಕರ್ನಾಟಕ ರಾಜ್ಯ ಫೆಡೆರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಬೆಂಗಳೂರು ಇದರ ನೇತೃತ್ವದಲ್ಲಿ ನಡೆಯುತ್ತಿರುವ ರಾಜ್ಯವ್ಯಾಪಿ ಪ್ರತಿಭಟನೆ ಮತ್ತು ಅಬಕಾರಿ ಉದ್ಯಮದ ಪ್ರಸ್ತುತ ಸ್ಥಿತಿಯನ್ನು ಸರಕಾರದ ಗಮನಕ್ಕೆ ತರುವಲ್ಲಿ ನಡೆದ ಕಾರ್ಯಕ್ರಮದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ವತಿಯಿಂದ ಮಂಗಳೂರು ಮಿನಿ ವಿಧಾನಸಭಾ ಕಾರ್ಯಾಲಯದ ಮುಂಭಾಗದಲ್ಲಿ ಪ್ರತಿಭಟನಾ ಸಭೆಯನ್ನು ನಡೆಸಿ ಮನವಿಯನ್ನು ದ.ಕ ಜಿಲ್ಲಾಧಿಕಾರಿಯವರಿಗೆ ಹಸ್ತಾಂತರಿಸಲಾಯಿತು.
ಪ್ರತಿಭಟನಾ ಸಭೆಯಲ್ಲಿ ದ.ಕ ಜಿಲ್ಲೆಯಾದ್ಯಂತದ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ತಾಲೂಕಿನ ಸಂಘಗಳ ಪದಾಧಿಕಾರಿಗಳು ಹಾಗೂ ಸನ್ನದುದಾರರು ಭಾಗವಹಿಸಿದರು.
ಜಿಲ್ಲಾ ಪ್ರದಾನ ಕಾರ್ಯದರ್ಶಿ ಸಿ.ಎನ್. ಅಪ್ಪಚ್ಚುರವರು ಮಾತನಾಡುತ್ತಾ ಉದ್ಯಮದ ಅತೀವ ಶೋಷಣೀಯ ಸ್ಥಿತಿಯಲ್ಲಿ ಇಂದು ಇಲ್ಲಿ ನಾವು ಸೇರಬೇಕಾಗಿ ಬಂದಿರುವುದು ನಮ್ಮ ದುರ್ದೈವವೇ ಸರಿ ಎಂದರು.
ಸಭಾಧ್ಯಕ್ಷರಾಗಿದ್ದ ಜಿಲ್ಲಾ ಉಪಾಧ್ಯಕ್ಷರಾದ ಜೋಕಿಮ್ ಲೂಯಿಸ್ ಪಿಂಟೋರವರು ಉದ್ಯಮದ ಹೀನಾಯ ಪರಿಸ್ಥಿತಿ ಬಗ್ಗೆ ಮಾತನಾಡಿ ತಮ್ಮ ಕಳವಳವನ್ನು ಸನ್ನದುದಾರರೊಂದಿಗೆ ಹಂಚಿಕೊಂಡರು,
ಪುತ್ತೂರು ವಿಭಾಗದಿಂದ ತಾಲೂಕು ಅಧ್ಯಕ್ಷ ಪುರಂದರ ರೈ ಮಾತನಾಡಿ ಸಂಘಟಿತ ಹೋರಾಟಗಳಿಂದ ಸಮಸ್ಯೆಗಳನ್ನು ಸರಕಾರ ಮೂಲಕ ಬಗೆಹರಿಸಿಕೊಳ್ಳುವ ಬಗ್ಗೆ ನಾವೆಲ್ಲರೂ ಕಟಿಬದ್ಧರಾಗಿರಬೇಕಾದ ಅಗತ್ಯತೆ ಇಂದು ಎದುರಾಗಿದೆ ಎಂದು ತಿಳಿಸಿದರು.
ಮಂಗಳೂರು ತಾಲೂಕು ಅದ್ಯಕ್ಷರಾದ ಕೆ.ಟಿ. ಸುವರ್ಣ ರವರು ಮಾತನಾಡಿ ಸರಕಾರ ಸನ್ನದುಗಳನ್ನು ಹರಾಜು ಹಾಕುವ ಮೂಲಕ ಸಾಂಪ್ರದಾಯಕವಾಗಿ ತಲೆಮಾರುಗಳಿಂದ ಉದ್ಯಮದಲ್ಲಿ ತೊಡಗಿ ಕೊಂಡಿರುವ ಸನ್ನದುದಾರರನ್ನು ಬೀದಿಗೆ ತರುವ ಸರಕಾರದ ಕೆಟ್ಟ ಅಲೋಚನೆಗಳ ಬಗ್ಗೆ ಕಳವಳ ವ್ಯಕ್ತ ಪಡಿಸಿ ಜೊತೆಯಾಗಿ ಹೋರಾಟ ಮಾಡಿ ಉದ್ಯಮವನ್ನು ಉಳಿಸಿ ಕೊಳ್ಳುವಂತೆ ಕರೆ ನೀಡಿದರು.
ಪ್ರತಿಭಟನಾ ಸಭೆಯ ಕೊನೆಯಲ್ಲಿ ಜಿಲ್ಲಾ ಉಪಾದ್ಯಕ್ಷರಾದ ಪಿ.ಎಮ್. ನಾರಾಯಣ ಮೂಡಬಿದ್ರೆ ಇವರು ದನ್ಯವಾದ ಸಮರ್ಪಿಸಿದರು. ಜಿಲ್ಲಾ ಕಾರ್ಯದರ್ಶಿಯವರಾದ ಓಂಪ್ರಸಾದ್ ಬಾರ್ದಿಲ ಕಾರ್ಯಕ್ರಮವನ್ನು ನಿರೂಪಿಸಿದರು.
ಸಭೆಯ ನಂತರ ಜಿಲ್ಲಾ ಉಪಾಧ್ಯಕ್ಷ ಜೆ.ಎಲ್. ಪಿಂಟೋ, ಪ್ರಧಾನ ಕಾರ್ಯದರ್ಶಿ ಸಿ.ಎನ್. ಅಪ್ಪಚು, ಕಾರ್ಯದರ್ಶಿ ಓಂಪ್ರಸಾದ್ ಬಾರ್ದಿಲ ,ಸದಸ್ಯ ಪ್ರಸಾದ್ ಶೆಟ್ಟಿ ಮಂಗಳೂರು ತಾಲೂಕು ಅಧ್ಯಕ್ಷ ಕೆ.ಟಿ. ಸುವರ್ಣ ಜಿಲ್ಲಾದಿಕಾರಿಯವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.