
ವಿಟ್ಲದ ಪೋಕ್ಸೋ ಪ್ರಕರಣದಲ್ಲಿ ಬಾಲಕಿಗೆ ನ್ಯಾಯ ದೊರಕಿಲ್ಲ: ಕುಂದುಕೊರತೆ ಸಭೆಯಲ್ಲಿ ದಲಿತ ನಾಯಕರ ಅಸಮಾಧಾನ
ಮಂಗಳೂರು: ವಿಟ್ಲ ಪೊಲೀಸ್ ಠಾಣೆಯಲ್ಲಿ ಕಳೆದ ತಿಂಗಳು ದಾಖಲಾಗಿರುವ 15 ವರ್ಷದ ಬಾಲಕಿ ಮೇಲಿನ ಪೋಕ್ಸೋ ಪ್ರಕರಣದಲ್ಲಿ ಬಾಲಕಿಗೆ ಇನ್ನೂ ನ್ಯಾಯ ದೊರಕಿಲ್ಲ. ಆರೋಪಿಯ ಬಂಧನವಾಗಿಲ್ಲ ಎಂಬ ಅಸಮಾಧಾನ ದಲಿತ ನಾಯಕರಿಂದ ವ್ಯಕ್ತವಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಡಿಸಿಪಿ ಸಿದ್ಧಾರ್ಥ್ ಗೋಯಲ್ ಅಧ್ಯಕ್ಷತೆ, ಡಿಸಿಪಿ ರವಿಶಂಕರ್, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಸಿ.ಎ. ಸೈಮನ್, ಎಎಸ್ಪಿ ರಾಜೇಂದ್ರ ಅವರ ಉಪಸ್ಥಿತಿಯಲ್ಲಿ ನಡೆದ ದಲಿತರ ಕುಂದುಕೊರತೆಗಳ ಮಾಸಿಕ ಸಭೆಯಲ್ಲಿ ಈ ಆರೋಪ ವ್ಯಕ್ತವಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಎಎಸ್ಪಿ ರಾಜೇಂದ್ರ ಅವರು, ಈ ಪ್ರಕರಣ ಜಾರ್ಜ್‌ಶೀಟ್ ಹಂತಕ್ಕೆ ಬಂದಿದೆ ಎಂದು ಹೇಳಿದರು.
ಈ ಪ್ರಕರಣದ ಬಗ್ಗೆ ದಲಿತ ಹಾಗೂ ಇತರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರೂ ನ್ಯಾಯ ದೊರಕಿಲ್ಲ. ಜಿಲ್ಲಾ ಮಟ್ಟದ ಪೊಲೀಸ್ ಕುಂದು ಕೊರತೆ ಸಭೆಗೆ ಎಸ್ಪಿಯವರು ಹಾಜರಾಗುವುದಿಲ್ಲ. ಕಮಿಷನರೇಟ್ ಸಭೆಯಲ್ಲಿ ಪೊಲೀಸ್ ಆಯುಕ್ತರು ಹಾಜರಿರಬೇಕು ಎಂಬ ಆಗ್ರಹವೂ ಸಭೆಯಲ್ಲಿ ದಲಿತ ನಾಯಕರಿಂದ ಕೇಳಿ ಬಂತು.
ಬಾಳೆಪುಣಿಯ ಕೊರಗ ಕುಟುಂಬಗಳು ವಾಸಿಸುವ ತಗ್ಗು ಪ್ರದೇಶದಲ್ಲಿ ತ್ಯಾಜ್ಯ ಸುರಿಯುವುದನ್ನು ನಿಲ್ಲಿಸಲಾಗಿಲ್ಲ. ಇತ್ತೀಚೆಗೆ ಈ ಬಗ್ಗೆ ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಸ್ಥಳೀಯರ ಮೇಲೆ ಸ್ಥಳೀಯ ಪಿಡಿಒ ಅನುಚಿತವಾಗಿ ವರ್ತಿಸಿದ್ದಾರೆ ಎಂಬುದಾಗಿ ಎಸ್.ಪಿ. ಆನಂದ್ ಸಭೆಯಲ್ಲಿ ದೂರಿದರು.
ಸದ್ಯ ಆ ಜಾಗದಲ್ಲಿ ಹಸಿ ಕಸ ಮಾತ್ರವೇ ವಿಲೇವಾರಿ ಮಾಡಲಾಗುತ್ತಿದೆ. ಹೊಸ ಜಾಗವನ್ನು ಹುಡುಕಲಾಗುತ್ತಿದೆ ಎಂದು ಸ್ಥಳೀಯ ಠಾಣಾಧಿಕಾರಿ ಮಾಹಿತಿ ನೀಡಿದರು.
ನಿಷೇಧಿತ ಮಾದಕ ದ್ರವ್ಯಗಳ ಬಳಕೆ ಕುರಿತಂತೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದಾಗ ಪೊಲೀಸರು ತಕ್ಷಣ ಸ್ಪಂದಿಸುವ ಕೆಲಸ ಮಾಡಬೇಕು. ಉಳ್ಳಾಲದಲ್ಲಿ ಪ್ರಕರಮವೊಂದಕ್ಕೆ ಸಂಬಂಧಿಸಿ ಠಾಣಾ ಸಭೆಯಲ್ಲಿ ಮನವಿ ಮಾಡಿದರೂ ಯಾವುದೇ ಕ್ರಮ ವಹಿಸಲಾಗಿಲ್ಲ. ಬಳಿಕ 10 ದಿನಗಳ ಬಳಿಕ ಪೊಲೀಸ್ ಆಯುಕ್ತರಿಗೆ ವಿಚಾರ ತಿಳಿಸಿದಾಗ ಕ್ರಮ ವಹಿಸಲಾಯಿತಾದರೂ, ಸಂಬಂಧಪಟ್ಟವರು ಆ ಸಂದರ್ಭ ಆ ಜಾಗದಲ್ಲಿರಲಿಲ್ಲ ಎಂದು ಗಿರೀಶ್ ಕುಮಾರ್ ಎಂಬವರು ಆಕ್ಷೇಪಿಸಿದರು.
ಈ ಬಗ್ಗೆ ಡಿಸಿಪಿ ಸಿದ್ಧಾರ್ಥ್ ಗೋಯಲ್‌ರವರು ಸ್ಥಳೀಯ ಠಾಣಾಽಕಾರಿಯನ್ನು ಪ್ರಶ್ನಿಸಿ, ಕ್ರಮಕ್ಕೆ ಆಗ್ರಹಿಸಿದರು.
ಬೆಂದೂರ್‌ವೆಲ್ ಪಂಪ್‌ಹೌಸ್‌ನಲ್ಲಿ 20 ವರ್ಷದಿಂದ ಕೆಲಸ ಮಾಡುತ್ತಿದ್ದ ದಲಿತ ಸಮುದಾಯದ ವ್ಯಕ್ತಿಯನ್ನು ಕೆಲಸದಿಂದ ತೆಗೆದು ಬೇರೆಯವರನ್ನು ನೇಮಕ ಮಾಡಲಾಗಿದೆ. ಈಬಗ್ಗೆ ವಿಚಾರಣೆ ನಡೆಸಿ ನ್ಯಾಯ ಒದಗಿಸಬೇಕು ಎಂದು ವಿಶ್ವನಾಥ್ ಆಗ್ರಹಿಸಿದರು.
ಎಲ್ಲಾ ಠಾಣೆಗಳಲ್ಲಿ ದಲಿತ ಕುಂದು ಕೊರತೆ ಸಭೆಯನ್ನು ಸಮರ್ಪಕವಾಗಿ ನಡೆಸಬೇಕು ಎಂದು ರಮೇಶ್ ಕೋಟ್ಯಾನ್ ಒತ್ತಾಯಿಸಿದರು.
ನೀಲಯ್ಯ ಎಂಬವರು ಮೂಡಬಿದ್ರೆಯ ಘಟನೆಯೊಂದನ್ನು ಉಲ್ಲೇಖಿಸಿ, ಜಾತ್ರೆ, ಸಭೆ ಸಮಾರಂಭಗಳ ವೇಳೆ ನೆಲದ ಮೇಲೆ ವಿದ್ಯುತ್ ವಯರ್‌ಗಳನ್ನು ಅಳವಡಿಸದಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಎಸ್ಟಿಗಳ ಭೂಮಿ ಎಂದರೆ ತ್ಯಾಜ್ಯ ಹಾಕುವ ಜಾಗ ಎಂಬಂತಾಗಿದೆ. ಮುಲ್ಕಿ, ಬಂಟ್ವಾಳದ ಕೆಲವು ಕಡೆ ಈ ರೀತಿ ಪ್ರಕರಣಗಳ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ತಲೆ ತಲಾಂತರಗಳಿಂದ ಶೋಷಣೆಯಿಂದ ಬದುಕುತ್ತಿರುವವರ ಮೇಲೆ ಈ ರೀತಿಯ ಅನ್ಯಾಯ ಮಾಡಬಾರದು ಎಂದು ಆಗ್ರಹಿಸಿದ ಚಂದ್ರಕುಮಾರ್, ಉರ್ವಾಸ್ಟೋರ್‌ನಲ್ಲಿ ನಿರ್ಮಾಣವಾಗಿರುವ ಅಂಬೇಡ್ಕರ್ ಭವನದ ಎದುರು ಅಂಬೇಡ್ಕರ್ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು ಎಂದರು.
ಎಕ್ಕೂರು ಮೈದಾನ ಸೇರಿದಂತೆ ನಿರ್ಜನ ಪ್ರದೇಶಗಳಲ್ಲಿ ರಾತ್ರಿ ಹೊತ್ತು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ರಾತ್ರಿ ಗಸ್ತು ವ್ಯವಸ್ಥೆಯನ್ನು ಬಿಗಿಗೊಳಿಸಬೇಕು ಎಂದು ಎಸ್.ಪಿ. ಆನಂದ ಅವರು ಆಗ್ರಹಿಸಿದರೆ, ಬಂಟ್ವಾಳ ಸರಪಾಡಿಯ ಮಣಿನಾಲ್ಕೂರು ಬಳಿ ರುದ್ರಭೂಮಿ ವ್ಯವಸ್ಥೆ ಮಾಡಬೇಕು ಎಂದು ಚಂದ್ರಹಾಸ ನಾಯ್ಕ್ ಆಗ್ರಹಿಸಿದರು.
ಡಿಸಿಆರ್‌ಇ ಠಾಣೆಗೆ ಕುಂದುಕೊರತೆ ದೂರು ನೀಡಿ:
ನಾಗರಿಕ ಹಕ್ಕು ನಿರ್ದೇಶನಾಲಯ (ಡಿಸಿಆರ್‌ಇ) ಠಾಣೆಯು ಕಾರ್ಯಾರಂಭಿಸಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ತಮ್ಮ ಯಾವುದೇ ರೀತಿಯ ಕುಂದುಕೊರತೆಗೆ ಸಂಬಂಽಸಿದ ದೂರುಗಳನ್ನು ಕೂಡಾ ಠಾಣೆಗೆ ನೀಡಬಹುದು. ಯಾವುದೇ ಪ್ರಕರಣ ದಾಖಲಿಸಿಕೊಳ್ಳಲು ಸ್ಥಳೀಯ ಠಾಣೆಗಳಿಗೂ ಜವಾಬ್ಧಾರಿ ಇದೆ. ಇದೀಗ ಡಿಸಿಆರ್‌ಇಗೆ ವಿಶೇಷ ಅಧಿಕಾರ ನೀಡಲಾಗಿದ್ದು, ದಲಿತರಿಗೆ ಸಂಬಂಽಸಿದ ಪ್ರಕರಣಗಳು ಹಾಗೂ ಕುಂದುಕೊರತೆಗಳು ಅಲ್ಲಿಂದಲೇ ವಿಚಾರಣೆಗೊಳಪಡಲಿವೆ ಎಂದು ಡಿಸಿಪಿ ಸಿದ್ಧಾರ್ಥ್ ಗೋಯಲ್ ತಿಳಿಸಿದರು.
ಎಫ್‌ಐಆರ್ ಪ್ರಕರಣವಲ್ಲದೆ, ದೂರು ಅರ್ಜಿಗಳನ್ನು ಕೂಡಾ ಡಿಸಿಆರ್‌ಇ ಠಾಣೆಗೆ ನೀಡಬಹುದು ಎಂದು ಎಎಸ್ಪಿ ರಾಜೇಂದ್ರ ಅವರು ಹೇಳಿದರು.
ಡಿಸಿಆರ್‌ಇಯ ಎಸ್ಪಿ ಸಿ.ಎ. ಸೈಮನ್ ಮಾತನಾಡಿ, ದ.ಕ. ಜಿಲ್ಲೆಯಲ್ಲೂ ಡಿಸಿಆರ್‌ಇ ಪೊಲೀಸ್ ಠಾಣೆ ಅಸ್ತಿತ್ವಕ್ಕೆ ಬಂದಿದೆ. ನಾಗರಿಕ ಹಕ್ಕು ನಿರ್ದೇಶನಾಲಯದ ಆದೇಶದಂತೆ, ಶೇ.18ರ ಮೀಸಲಾತಿ ಉಲ್ಲಂಘಟನೆ, ಪರಿಶಿಷ್ಟರ ಕಲ್ಯಾಣಕ್ಕಾಗಿ ನೀಡಿದ ಅನುದಾನ ದುರುಪಯೋಗ, ಸರಕಾರಿ ಭೂಮಿ ಮಂಜೂರು ಮಾಡುವ ಆದೇಶ ಉಲ್ಲಂಘನೆ, ಗೋಮಾಳ ಭೂಮಿಯಿಂದ ಪರಿಶಿಷ್ಟರನ್ನು ಕಾನೂನು ವಿರುದ್ಧವಾಗಿ ಒಕ್ಕಲೆಬ್ಬಿಸುವ ಬಗ್ಗೆ, ನಿವೇಶನಗಳ ಹಂಚಿಕೆ ನಿಯಮಗಳ ಉಲ್ಲಂಘನೆ, ನಿಯಮಬಾಹಿರ ಜಮೀನುಗಳ ಪರಭಾರೆ, ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವುದು, ಜೀತ ನಿರ್ಮೂಲನೆ ಕಾಯ್ದೆಯಡಿ ದಾಖಲಾದ ಪ್ರಕರಣ, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಅನುದಾನದ ದುರುಪಯೋಗ, ಸಂವಿಧಾನಾತ್ಮಕ ರಕ್ಷಣೆ ಉಲ್ಲಂಘನೆ ಮೊದಲಾದ ದೂರು ಅರ್ಜಿಗಳನ್ನು ಡಿಸಿಆರ್‌ಇ ಠಾಣೆಗೆ ಸಲ್ಲಿಸಬಹುದು ಎಂದು ವಿವರಿಸಿದರು.