
‘ಪಾಕಿಸ್ತಾನದ ಪಾಪದ ಕೊಡ ತುಂಬಿದೆ’: ನಳಿನ್ ಕುಮಾರ್ ಕಟೀಲ್
ಮಂಗಳೂರು: ಪಹಲ್ಗಾಮ್ನಲ್ಲಿ ಪ್ರವಾಸಿಗರು, ಜನಸಾಮಾನ್ಯರ ಮೇಲೆ ದಾಳಿ ನಡೆಸಿದ ಪಾಕಿಸ್ತಾನಕ್ಕೆ ಭಾರತ ಸೈನ್ಯ ತಕ್ಕ ಉತ್ತರ ನೀಡಿದೆ. ಪಾಕಿಸ್ತಾನದ ಪಾಪದ ಕೊಡ ತುಂಬಿದ್ದು, ಮುಂದಿನ ದಿನಗಳಲ್ಲಿ ತಕ್ಕ ಶಾಸ್ತಿ ಅನುಭವಿಸಲಿದೆ ಎಂದು ಬಿಜೆಪಿ ನಾಯಕ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ವರ್ಷಗಳಿಂದ ಉಗ್ರರನ್ನು ಸಾಕಿ ಭಾರತದ ಮೇಲೆ ಛೂ ಬಿಡುವ ಕೆಲಸ ಪಾಕಿಸ್ತಾನ ಮಾಡಿಕೊಂಡು ಬಂದಿದೆ. ಇದಕ್ಕೆ ಸಮರ್ಥ ಉತ್ತರ ನೀಡಲಾಗಿದ್ದು, ಉಗ್ರರ ಡೇರೆಗಳನ್ನು ಹುಡುಕಿ ಹೊಡೆಯುವ ಕೆಲಸ ನಡೆದಿದೆ. ಭಾರತದ ಉತ್ತರದಿಂದ ಪಾಕಿಸ್ತಾನ ಪಾಠ ಕಲಿಯಬೇಕು. ಆದರೆ, ಪಾಠ ಕಲಿತಂತಿಲ್ಲ. ಪಾಕಿಸ್ತಾನದ ಪ್ರತಿದಾಳಿಗೆ ಭಾರತದ ಸೈನಿಕರು ಸಮರ್ಥವಾಗಿ ಉತ್ತರ ನೀಡುವ ಕೆಲಸ ಮಾಡುತ್ತಿದ್ದಾರೆ.
ಭಾರತದಿಂದ ಉಗ್ರವಾದಿಗಳ ಡೇರೆ ಮಾತ್ರ ಹೊಡೆದುರುಳಿದ್ದು ಹೊರತಾಗಿ ಪಾಕಿಸ್ತಾನದ ಪ್ರಜೆಗಳ ಮೇಲೆ ದಾಳಿ ನಡೆಸಿಲ್ಲ. ಆದರೆ ಪಾಕಿಸ್ತಾನ ತನ್ನ ಬುದ್ದಿಯನ್ನು ಬಿಡದೆ ನಮ್ಮ ಜನಸಾಮಾನ್ಯರ ಮೇಲೆ ದಾಳಿ ಮಾಡಿದೆ. ಎಲ್ಲವನ್ನೂ ನಿಗ್ರಹಿಸುವ ಕೆಲಸ ನಮ್ಮ ಸೇನೆ, ಸರಕಾರ ಮಾಡುತ್ತಿದೆ ಎಂದು ತಿಳಿಸಿದರು.