
ವಿಶ್ವ ರೆಡ್‌ಕ್ರಾಸ್ ದಿನಾಚರಣೆ ಸಂಕಷ್ಟಗಳಿಗೆ ಸ್ಪಂದಿಸುವುದೇ ರೆಡ್‌ಕ್ರಾಸ್ ಧ್ಯೇಯ
ಮಂಗಳೂರು: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದ.ಕ. ಜಿಲ್ಲಾ ಘಟಕದ ವತಿಯಿಂದ ವಿಶ್ವ ರೆಡ್‌ಕ್ರಾಸ್ ದಿನಾಚರಣೆ ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಅಪರ ಜಿಲ್ಲಾಧಿಕಾರಿ ಎಸ್.ಎ. ಪ್ರಭಾಕರ ಶರ್ಮ ಮಾತನಾಡಿ, ‘ಜನತೆಯ ಸಂಕಷ್ಟಗಳಿಗೆ ಸ್ಪಂದಿಸುವುದೇ ರೆಡ್‌ಕ್ರಾಸ್ ಸಂಸ್ಥೆಯ ಧ್ಯೇಯವಾಗಿದೆ. ಸಣ್ಣಪುಟ್ಟ ನೆರವು ನೀಡುವ ಮೂಲಕ ಕೂಡಾ ಇನ್ನೊಬ್ಬರ ಭವಿಷ್ಯ ರೂಪಿಸಲು ಸಾಧ್ಯವಿದೆ. ಅಂತಹ ಸಮಾಜಮುಖಿ ಸೇವೆಗೆ ಇಡೀ ವಿಶ್ವದಲ್ಲೇ ರೆಡ್‌ಕ್ರಾಸ್ ಸಂಸ್ಥೆ ಅತ್ಯುತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರೆಡ್‌ಕ್ರಾಸ್ ಸಂಸ್ಥೆಯ ದ.ಕ. ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ, ‘ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಚಳವಳಿಯ ಸಂಸ್ಥಾಒಕ ಹೆನ್ರಿ ಡ್ಯೂನಾಂಟ್ ಅವರ ಜನ್ಮದಿನವನ್ನು ವಿಶ್ವ ರೆಡ್‌ಕ್ರಾಸ್ ದಿನವಾಗಿ ಆಚರಿಸಲಾಗುತ್ತಿದೆ. ಮಾನವೀಯ ಸೇವೆ ಹಾಗೂ ವಿಶ್ವ ಭಾತೃತ್ವದ ಸಂದೇಶವನ್ನು ರೆಡ್‌ಕ್ರಾಸ್ ಸಂಸ್ಥೆ ಜಗತ್ತಿಗೆ ಸಾರಿದೆ’ ಎಂದರು.
ರೋಟರಿ ಜಿಲ್ಲೆ 3181 ಇದರ ಮಾಜಿ ಗವರ್ನರ್‌ಗಳಾದ ವಿನೋದ್ ಕುಡ್ವ, ಸದಾಶಿವ ಶೆಟ್ಟಿ, ರೆಡ್‌ಕ್ರಾಸ್ ಸಂಸ್ಥೆಯ ದ.ಕ.ಜಿಲ್ಲಾ ಘಟಕದ ಖಜಾಂಜಿ ಮೋಹನ್ ಶೆಟ್ಟಿ, ನಿರ್ದೇಶಕರಾದ ಪಿ.ಬಿ.ಹರೀಶ್ ರೈ, ವಿಠಲ.ಎ., ಯುವ ರೆಡ್‌ಕ್ರಾಸ್ ಮಂಗಳೂರು ವಿ.ವಿ. ಘಟಕದ ನೋಡಲ್ ಆಫೀಸರ್ ಡಾ.ಗಾಯತ್ರಿ.ಎನ್. ಮುಖ್ಯ ಅತಿಥಿಗಳಾಗಿದ್ದರು.
ವಿಶ್ವ ರೆಡ್‌ಕ್ರಾಸ್ ದಿನಾಚರಣೆ ಅಂಗವಾಗಿ ಅರ್ಹ ಫಲಾನುಭವಿಗಳಿಗೆ ಶ್ರವಣ ಸಾಧನಗಳನ್ನು ವಿತರಿಸಲಾಯಿತು. ರೆಡ್‌ಕ್ರಾಸ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾಗಿ ನೇಮಕಗೊಂಡ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅವರನ್ನು ಇದೇ ಸಂದರ್ಭ ಯುವ ರೆಡ್‌ಕ್ರಾಸ್ ಮಂಗಳೂರು ವಿ.ವಿ. ಘಟಕದ ಪರವಾಗಿ ಸನ್ಮಾನಿಸಲಾಯಿತು.
ಯುವ ರೆಡ್‌ಕ್ರಾಸ್ ಸಂಯೋಜನಾಧಿಕಾರಿಗಳಾದ ನಟೇಶ್ ಆಳ್ವ, ಯೋಗೀಶ್ ಶ್ಯಾನ್‌ಭೋಗ್, ಸಂತೋಷ್ ಪಿಂಟೊ, ದೀಕ್ಷಿತಾ ಉಪಸ್ಥಿತರಿದ್ದರು. ಯುವ ರೆಡ್‌ಕ್ರಾಸ್ ಉಪ ಸಮಿತಿಯ ನಿರ್ದೇಶಕ ಸಚೇತ್ ಸುವರ್ಣ ಸ್ವಾಗತಿಸಿ, ಜಿಲ್ಲಾ ಘಟಕದ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ವಂದಿಸಿದರು. ಡಾ.ಅನುರಾಧ ಕುರುಂಜಿ ಕಾರ್ಯಕ್ರಮ ನಿರೂಪಿಸಿದರು.