
‘ಕುಡುಬಿ’ ಜಾತಿಯನ್ನು ‘ಪರಿಶಿಷ್ಟ ಜಾತಿ’ ಎಂದು ಪರಿಗಣಿಸಿ: ಕುಡುಬಿ ಸಮಾಜ ಸೇವಾ ಸಂಘ ಒತ್ತಾಯ
ಮಂಗಳೂರು: ಪರಿಶಿಷ್ಟ ಜಾತಿಗಳ ಸಮೀಕ್ಷೆಯ ಸಂದರ್ಭದಲ್ಲಿ ಕುಡುಬಿ ಜಾತಿಯನ್ನು ‘ಪರಿಶಿಷ್ಟ ಜಾತಿ’ ಎಂಬುದಾಗಿ ಪರಿಗಣಿಸಬೇಕು ಎಂದು ದ.ಕ ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘ ಒತ್ತಾಯಿಸಿದೆ.
ಈ ಹಿಂದೆ ಪರಿಶಿಷ್ಟ ಜಾತಿ ಎಂಬುದಾಗಿ ಪರಿಗಣಿಸಲ್ಪಟ್ಟಿದ್ದರೂ ಅನಂತರ ತಿದ್ದುಪಡಿಗಳ ಪರಿಣಾಮ ಹಾಗೂ ಕಣ್ತಪ್ಪಿನ ಕಾರಣದಿಂದಾಗಿ ಕುಡುಬಿ ಜಾತಿ ಪರಿಶಿಷ್ಟ ಜಾತಿಯ ಪಟ್ಟಿಯಿಂದ ಹೊರಗೆ ಉಳಿದಿದೆ. ಇದರಿಂದ ಕುಡುಬಿ ಜನಾಂಗಕ್ಕೆ ಅನ್ಯಾಯವಾಗಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣ ಕೊಂಪದವು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕುಡುಬಿ ಜಾತಿಯನ್ನು 1936ರಿಂದ 1949ರವರೆಗಿನ ಮದರಾಸು ಪ್ರಾಂತ್ಯದ ಸೌತ್ ಕೆನರಾ ಜಿಲ್ಲೆಯಲ್ಲಿನ ಡಿಪ್ರೆಸ್ಸ್ಡ್ ಕ್ಲಾಸ್ ಎಂದು ಗುರುತಿಸಲಾಗಿತ್ತು. ಸಂವಿಧಾನದ ಅನುಚ್ಛೇದ 341(1)ರಂತೆ ‘ದಿ ಕಾನ್ಸ್ಟಿಟ್ಯೂಷನ್(ಷೆಡ್ಯೂಲ್ಡ್ ಕಾಸ್ಟ್) ಆರ್ಡರ್ 1950’ರಲ್ಲಿ ಮದ್ರಾಸ್ ರಾಜ್ಯದ ಅವಿಭಜಿತ ದ.ಕ ಜಿಲ್ಲೆಯ ಕುಡುಬಿ ಜಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಸಮುದಾಯಕ್ಕೆ ಸಂವಿಧಾನ ಬದ್ದ ಹಕ್ಕನ್ನು ನೀಡಲಾಗಿತ್ತು. 1953ರಲ್ಲಿ ಕಾಕಾ ಸಾಹೇಬ ಕಾಲೇಲ್ಕರ್ ಕಮಿಷನ್ನ ವರದಿಯು ‘ದಿ ಷೆಡ್ಯೂಲ್ಡ್ ಕ್ಲಾಸಸ್ ಆಂಡ್ ಷೆಡ್ಯೂಲ್ಡ್ ಟ್ರೈಬ್ ಲಿಸ್ಟ್(ಮೋಡಿಫಿಕೇಷನ್) ಆರ್ಡರ್ 1956’ರ ತಿದ್ದುಪಡಿಯಲ್ಲಿ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಶಿ-ರಸ್ಸು ಮಾಡಲಾಗಿತ್ತು. ಆದರೆ ಈ ತಿದ್ದುಪಡಿ ಆದೇಶದಲ್ಲಿ ಕುಡುಬಿ ಜಾತಿಯ ಹೆಸರು ಸೇರ್ಪಡೆ ಮಾಡಿಲ್ಲ ಎಂದು ಅವರು ಹೇಳಿದರು.
1901ರಿಂದ 1951ರವರೆಗಿನ ಜನಗಣತಿ ವರದಿಯಲ್ಲಿ ಸೌತ್ಕೆನರಾ ಜಿಲ್ಲೆಯ ಕುಡುಬಿ ಬದಲು ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿರುವ ಕುಡುಂಬಣ್ ಹೆಸರು ಸೇರಿಸಲಾಗಿದೆ. ಕರ್ನಾಟಕದ ಯಾವುದೇ ಪ್ರದೇಶದಲ್ಲಿ ಕುಡುಂಬಣ್ ಸಮುದಾಯ ಇಲ್ಲ. 1950ರಲ್ಲಿ ರಾಷ್ಟ್ರಪತಿ ಹೊರಡಿಸಿದ ಪಟ್ಟಿಯಲ್ಲಿನ ಯಾವುದೇ ಜಾತಿಯನ್ನು ಅಥವಾ ಉಪಜಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರ ತೆಗೆಯುವಂತಿಲ್ಲ ಅಥವಾ ಬದಲಾಯಿಸುವಂತಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದೆ. ಇದೀಗ ರಾಜ್ಯದಲ್ಲಿ ಒಳಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಯುತ್ತಿದ್ದು ಸಮೀಕ್ಷೆಗಳಿಗೆ ಒಳಪಡಿಸಿದ ಜಾತಿಗಳ ಪಟ್ಟಿಯಲ್ಲಿ ಕರ್ನಾಟಕದಲ್ಲಿ ಇಲ್ಲದ ಕುಡುಂಬಣ್ ಜಾತಿಯ ಹೆಸರಿದ್ದು ಇದನ್ನು ಕುಡುಬಿ ಜಾತಿಯ ಬದಲಾಗಿ ತಪ್ಪಾಗಿ ಹಾಕಲಾಗಿದೆ. ಇದನ್ನು ಸರಿಪಡಿಸಬೇಕು. ಸರಕಾರ ಈ ಬಗ್ಗೆ ಅಽಕಾರಿಗಳಿಗೆ ಸೂಚನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಶೇಖರ ಗೌಡ, ಉಪಾಧ್ಯಕ್ಷ ಕೊರ್ಗ್ಯ ಗೌಡ, ವಿದ್ಯಾವೇದಿಕೆಯ ಸಂಚಾಲಕ ಉದಯ ಮಂಗಳೂರು, ಕೆ.ಆರ್.ಗೌಡ ಉಪಸ್ಥಿತರಿದ್ದರು.