ಮಹಿಳೆ ಆತ್ಮಹತ್ಯೆ
ಕುಂದಾಪುರ: ಇಲ್ಲಿಗೆ ಸಮೀಪದ ತಲ್ಲೂರಿನಲ್ಲಿ ವಿವಾಹಿತ ಮಹಿಳೆಯೊಬ್ಬರು ಜುಲೈ 27ರಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಮಹಿಳೆ ಪವಿತ್ರ(37) ಎನ್ನಲಾಗಿದೆ.
ಪ್ರಕರಣ ವಿವರ:
ಬ್ರಹ್ಮಾವರ ತಾಲೂಕು ವಾರಂಬಳ್ಳಿ ಗ್ರಾಮದ ನಿವಾಸಿ ಪವಿತ್ರ 2016 ರಲ್ಲಿ ಉಪ್ಪಿನಕುದ್ರು ಶೇಷಗಿರಿಯವರ ಮಗ ಶ್ರೀಧರ ಎಂಬುವರೊಂದಿಗೆ ಮದುವೆಯಾಗಿ ಬಂದಿದ್ದರು. ಈ ಜೋಡಿಗೆ ಎರಡುವರೆ ವರ್ಷದ ಶಿವನ್ಯ ಎಂಬ ಹೆಣ್ಣು ಮಗು ಇದೆ. ಸುಮಾರು 3 ವರ್ಷಗಳಿಂದ ಪವಿತ್ರ ತನ್ನ ಗಂಡ ಹಾಗೂ ಮಗುವಿನೊಂದಿಗೆ ತಲ್ಲೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಮಾಡಿಕೊಂಡಿದ್ದರು.
ಜುಲೈ 27ರಂದು ರಂದು ಸಂಜೆ ಸುಮಾರು 3 ಗಂಟೆಗೆ ಆಕೆಯ ತಾಯಿ ಸುಮತಿ ಎಂಬವರು ಪವಿತ್ರಾಳಿಗೆ ಕರೆ ಮಾಡಿದಾಗ ಯಾರೋ ಒಬ್ಬರು ಹೆಂಗಸು ಕರೆಯನ್ನು ಸ್ವೀಕರಿಸಿ, ನಿಮ್ಮ ಮಗಳು ಕುತ್ತಿಗೆಗೆ ಬಳ್ಳಿ ಹಾಕಿಕೊಂಡಿದ್ದಾಳೆ ಕೂಡಲೇ ಬನ್ನಿ ಎಂಬುವುದಾಗಿ ತಿಳಿಸಿದರು. ತಾಯಿ ತಲ್ಲೂರಿಗೆ ಬಂದು ನೋಡಿದಾಗ ಪವಿತ್ರ ಕಬ್ಬಿಣದ ಹುಕ್ಕಿಗೆ ಶಾಲನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು ತಿಳಿದುಬಂದಿತು. ಗಂಡ ಹೆಂಡತಿ ಯಾವಾಗಲೂ ಜಗಳವಾಡುತ್ತಿದ್ದರು ಎಂದು ಪವಿತ್ರಳ ತಾಯಿ ಸುಮತಿ ಆರೋಪಿಸಿದ್ದಾರೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.