
ಮೂಡುಬಿದಿರೆ ಗಣೇಶೋತ್ಸವ ಶೋಭಾಯಾತ್ರೆ: ನಿಗದಿತ ಸಮಯದೊಳಗಡೆ ಮುಗಿಸಿ ಸಹಕರಿಸಿ
ಮೂಡುಬಿದಿರೆ: ಇಲ್ಲಿನ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆಯಂದು ನಡೆಯುವ ಶೋಭಾ ಯಾತ್ರೆಯಲ್ಲಿ ಸ್ತಬ್ದಚಿತ್ರಗಳ ವ್ಯವಸ್ಥಾಪಕರು ನಿಯಮವನ್ನು ಪಾಲಿಸುವ ಮೂಲಕ ಕಾರ್ಯಕ್ರಮವನ್ನು ನಿಗದಿತ ಅವಧಿಯೊಳಗೆ ಮುಕ್ತಾಯಗೊಳಿಸಲು ಸಹಕಾರ ನೀಡಬೇಕೆಂದು ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಹೇಳಿದರು.
ಅವರು ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ಮೂಡುಬಿದಿರೆ ವತಿಯಿಂದ ಆಗಸ್ಟ್ 27ರಿಂದ 31ರವರೆಗೆ ನಡೆಯುವ ಮೂಡುಬಿದಿರೆ ಶ್ರೀ ಗಣೇಶೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಸಮಾಜ ಮಂದಿರದಲ್ಲಿ ನಡೆದ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಗಣಪತಿ ದೇವರ ವಿಸರ್ಜನೆ ಮೆರವಣಿಗೆ ನಿಶ್ಮಿತಾ ಸರ್ಕಲ್ ಬಳಿಯಿಂದ ರಾತ್ರಿ 8 ಗಂಟೆಗೆ ಹೊರಟು 11.30ಕ್ಕೆ ಸಮಾಪನಗೊಳ್ಳಬೇಕು. ಈ ಬಾರಿ ಟ್ಯಾಬ್ಲೊಗಳು ಬಸ್‌ನಿಲ್ದಾಣದಲ್ಲಿ ಸೇರಲಿದ್ದು ಅವುಗಳಿಗೆ ಕ್ರಮ ಸಂಖ್ಯೆ ನೀಡಲಾಗುತ್ತದೆ. ಅಲ್ಲಿಂದ ನಿರ್ಗಮನ ದ್ವಾರದಲ್ಲಿ ಹೊರಟು ಪುರಸಭೆ ರಸ್ತೆಯಲ್ಲಿ ಸಂಚರಿಸಿ ನಿಶ್ಮಿತಾ ಸರ್ಕಲ್‌ನಲ್ಲಿ ಮುಖ್ಯ ರಸ್ತೆಯನ್ನು ಸೇರಿ ಮುಂದುವರಿಯಲಿವೆ. ಟ್ಯಾಬ್ಲೊಗಳಿಗೆ ನಿಗದಿಪಡಿಸಿದ ಸ್ಥಳ ಮತ್ತು ಸಮಯದಲ್ಲಿ ಮಾತ್ರ ಪ್ರದರ್ಶನ ನೀಡಬೇಕು. ಪ್ರತಿ ಟ್ಯಾಬ್ಲೊ ಪಕ್ಕದಲ್ಲಿ ಅದರ ಮಾಲಕರು ಕಡ್ಡಾಯವಾಗಿ ಇರಬೇಕು. ಟ್ಯಾಬ್ಲೊಗಳಿಂದ ಮೆರವಣಿಗೆಗೆ ತಡೆಯಾಗಬಾರದು. ಅಶಾಂತಿಗೆ ಅವಕಾಶ ಕೊಡದಿರಿ. ಕಮಿಷನರ್ ಅವರ ಸೂಚನೆಯಂತೆ ಮೆರವಣಿಗೆಯ ಲೈವ್ ವಿಡಿಯೊವನ್ನು ಆಗಾಗ್ಗೆ ಅವರಿಗೆ ಕಳಿಸಲಾಗುತ್ತದೆ. ಮೆರವಣಿಗೆಯನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಲು ಮತ್ತು ನಿಗದಿತ ಸಮಯದೊಳಗೆ ಮುಕ್ತಾಯಗೊಳಿಸಲು ಟ್ಯಾಬ್ಲೊ ಮುಖ್ಯಸ್ಥರು ಗಣೇಶೋತ್ಸವ ಸಮಿತಿ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದು ಅವರು ತಿಳಿಸಿದರು.
ಡಾ.ಹರೀಶ್ ನಾಯಕ್ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಗಣೇಶೋತ್ಸವ ಟ್ರಸ್ಟ್ ನ ಅಧ್ಯಕ್ಷ ನಾರಾಯಣ ಪಿ.ಎಂ. ಮಾತನಾಡಿ ಮೂಡುಬಿದಿರೆ ಸಾರ್ವಜನಿಕ ಗಣೆಶೋತ್ಸವ ಊರಿನ ಹಬ್ಬವಾಗಿ ವರ್ಷದಿಂದ ವರ್ಷಕ್ಕೆ ವೈಭವದಿಂದ ಆಚರಿಸಲ್ಪಡುತ್ತಿದೆ. ಉತ್ಸವಕ್ಕೆ ವಿಶೇಷ ಮೆರುಗು ನೀಡುತ್ತಿರುವ ಟ್ಯಾಬ್ಲೊಗಳ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದನ್ನು ಸಭೆಯ ಗಮನಕ್ಕೆ ತಂದ ಅವರು ಈ ಬಾರಿ ಗುಣಮಟ್ಟದ ಟ್ಯಾಬ್ಲೊಗಳಿಗೆ ಆದ್ಯತೆ ನೀಡುವಂತೆ ಮತ್ತು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಟ್ಯಾಬ್ಲೊಗಳು ಯಾವುದಕ್ಕೆ ಸಂಬಂಧಪಟ್ಟವೆಂಬುದನ್ನು ಮೊದಲೆ ಸಮಿತಿ ಗಮನಕ್ಕೆ ತಂದರೆ ಉತ್ತಮ ಎಂದು ಆಯೋಜಕರಿಗೆ ತಿಳಿಸಿದರು. ಡಾ.ಮುರಳೀಕೃಷ್ಣ, ಟ್ರಸ್ಟ್ ನ ಮಾಜಿ ಅಧ್ಯಕ್ಷ ಶ್ರೀಪತಿ ಭಟ್, ಮೂಡ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್ ಉಪಸ್ಥಿತರಿದ್ದರು.
ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ ಸ್ವಾಗತಿಸಿದರು. ಚೇತನ್ ಕುಮಾರ್ ಶೆಟ್ಟಿ ನಿರೂಪಿಸಿದರು. ತೋಡಾರು ದಿವಾಕರ ಶೆಟ್ಟಿ ವಂದಿಸಿದರು.