
ಮಣ್ಣಿನ ಗುಣಮಟ್ಟವನ್ನು ಅರಿತು ತೋಟಗಾರಿಕಾ ಬೆಳೆಗಳನ್ನು ಮಾಡಿ
ಮೂಡುಬಿದಿರೆ: ಮಂಗಳೂರು ತೋಟಗಾರಿಕಾ ಇಲಾಖೆ, ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರ ಮತ್ತು ರೈತ ಜನ್ಯ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಜಂಟಿ ಆಶ್ರಯದಲ್ಲಿ ಶನಿವಾರ ಸಮಾಜ ಮಂದಿರದಲ್ಲಿ ಅನಾನಸು ಮತ್ತು ಡ್ರ್ಯಾಗನ್, ಹಣ್ಣುಗಳ ಉಪ ಉತ್ಪನ್ನ ಘಟಕ ಸ್ಥಾಪಿಸುವ ವಿಚಾರ ವಿನಿಮಯ ಕಾರ್ಯಕ್ರಮ ನಡೆಯಿತು.
ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ಡಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಪರಿಸರದ ವಿನಾಶದ ಬಗ್ಗೆ ಮನುಷ್ಯನಿಗಿಂತ ಮೊದಲೇ ಪ್ರಾಣಿ ಪಕ್ಷಿಗಳಿಗೆ ತಿಳಿದಿರುತ್ತವೆ. ತೋಟಗಾರಿಕಾ ಬೆಳೆಗಳನ್ನು ಬೆಳೆಯುವಾಗ ಆಯಾ ಮಣ್ಣಿನ ಗುಣಮಟ್ಟ, ಪೂರಕಾಂಶಗಳನ್ನು ಸಮಗ್ರವಾಗಿ ತಿಳಿದುಕೊಂಡು ಮುಂದುವರಿಯಬೇಕಾಗುತ್ತದೆ ಎಂದು ಹೇಳಿದ ಅವರು ತೋಟಗಾರಿಕಾ ಬೆಳೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಸಂವಾದದಲ್ಲಿ ಪ್ರಸ್ತುತಪಡಿಸಿದರು.
ಮುಖ್ಯ ಅತಿಥಿ ವಿವೇಕ್ ಸೋನ್ಸ್ ಮಾತನಾಡಿ ಹಣ್ಣಿನ ಯಾವುದೇ ಉಪ ಉತ್ಪನ್ನಗಳಾದ ಡ್ರೈ ಹಣ್ಣು, ಜ್ಯೂಸ್, ಇತ್ಯಾದಿ ತಯಾರಿಸುವಾಗ ಬಹಳ ಜಾಗರೂಕತೆಯನ್ನು ವಹಿಸಬೇಕಾಗುತ್ತದೆ. ಹಾಗೂ ಶೇಖರಣಾ ಜಾಗರೂಕತೆಗಳ ಬಗ್ಗೆ ಮೊದಲೇ ತಿಳುವಳಿಕೆಯನ್ನು ಹೊಂದಿರಬೇಕಾಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್ ಮಾತನಾಡಿ ಅಮುಲ್ ನಂತಹ ಸಂಸ್ಕರಣ ಘಟಕವನ್ನು ಅನಾನಸ್ಸು ಹಣ್ಣಿಗಾಗಿ ಸ್ಥಾಪಿಸಿ ಮೂಡುಬಿದಿರೆಯ ಬ್ರ್ಯಾಂಡ್ ಉತ್ಪನ್ನವನ್ನು ಜಗತ್ತಿಗೆ ಪರಿಚಯಿಸುವ ಎಂದು ಕರೆಕೊಟ್ಟರು.
ಉಪ್ಪಿನಂಗಡಿಯ ಜೆರೋಮ್ ಸಂವಾದದಲ್ಲಿ ಭಾಗವಹಿಸಿ ಸ್ಥಾಪಿಸುವ ಸಂಘಕ್ಕೇ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ನೀಡಿ ಸಹಕಾರಿ ಸಂಘದ ಏಳಿಗೆಗೆ ಒಂದಾಗಿರಬೇಕಾಗಿದೆ ಎಂದರು.
ರಾಜವರ್ಮ ಬೈಲಂಗಡಿ ವೇದಿಕೆಯಲ್ಲಿ ಹಾಜರಿದ್ದರು.
ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಅಭಯ್ ಕುಮಾರ್ ಸ್ವಾಗತಿಸಿದರು. ಜಿನೇಂದ್ರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ದೀಪಕ್ ವಂದಿಸಿದರು.