
ರಾಷ್ಟ್ರ, ಧರ್ಮ ಸಂರಕ್ಷಣೆಗಾಗಿ ಹಿಂದೂ ಸಮಾಜ ಜಾಗೃತವಾಗಬೇಕು: ರಾಧಾಕೃಷ್ಣ ಅಡ್ಯಂತಾಯ
ಉಜಿರೆ: ಬ್ರಹ್ಮ ತೇಜಸ್ಸು, ಮಾತೃಶಕ್ತಿ, ಕ್ಷಾತ್ರ ಪರಂಪರೆ ಮತ್ತು ಕರ್ಮಯೋಗ-ನಾಲ್ಕು ಶಕ್ತಿಗಳಿಂದ ದೇಶ ಎದ್ದು ನಿಂತಿದೆ. ಈ ಶಕ್ತಿಗಳ ಉದ್ದೀಪನದಿಂದ ರಾಷ್ಟ್ರ, ಧರ್ಮ ರಕ್ಷಣೆಗೆ ಹಿಂದೂ ಸಮಾಜ ಜಾಗೃತವಾಗಬೇಕು. ಧರ್ಮ ಅಧರ್ಮಗಳ ಸಂಘರ್ಷದ ಇಂದಿನ ಕಾಲಘಟ್ಟದಲ್ಲಿ ಸಂಘಟಿತ ಸಮಾಜದಿಂದ ಮಾತ್ರ ರಾಷ್ಟ್ರ, ಧರ್ಮ ರಕ್ಷಣೆಯಾಗಬಹುದು. ನಮ್ಮೊಳಗಿನ ರಾಷ್ಟ್ರ ಶಕ್ತಿ, ಭಕ್ತಿ ಜಾಗೃತಿಗಾಗಿ ದುಷ್ಟ ಶಕ್ತಿ, ಮಾನಸಿಕ ಶಕ್ತಿಗಳ ಉದ್ದೀಪನವಾಗಬೇಕು ಎಂದು ನಮೋ ಭಾರತ ಅಭಿಯಾನದ ಕಲ್ಲಡ್ಕದ ನಿವೃತ್ತ ಶಿಕ್ಷಕ ರಾಧಾಕೃಷ್ಣ ಅಡ್ಯಂತಾಯ ಹೇಳಿದರು.
ಅವರು ಜು.10 ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಡೆದ ಗುರುಪೂರ್ಣಿಮಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜ್ಞಾನ, ವಿಕಾಸ ಮತ್ತು ಅಜ್ಞಾನ ನಾಶ, ಸೃಷ್ಟಿ, ಸ್ಥಿತಿ, ಲಯಕಾರ್ಯದ ಶಕ್ತಿಯೇ ಗುರು. ಗುರು ಶಕ್ತಿ ಅಗಾಧವಾದುದು. ಪ್ರಕೃತಿ, ಪ್ರಾಣಿ ಪಕ್ಷಿಗಳೂ ನಮಗೆ ಜ್ಞಾನ ಕೊಡುತ್ತವೆ. ಭಕ್ತ ಪ್ರಹ್ಲಾದ, ಶಿವಭಕ್ತ ಮಾರ್ಕಂಡೇಯ, ದ್ರೌಪದಿಯ ಜನ್ಮ ಭೂಮಿ ಭಾರತ. ಆದಿಗುರು ವೇದವ್ಯಾಸರ ಜನ್ಮದಿನವೇ ಗುರುಪೂರ್ಣಿಮೆ. ಕ್ಷಣ ಕ್ಷಣಕ್ಕೆ ನಮ್ಮ ಬದುಕಿನಲ್ಲಿ ಗುರುಶಕ್ತಿಯ ನೆನಪು ಶಾಶ್ವತವಾಗಿರುತ್ತದೆ ಎಂದರು.
ತುಮಕೂರು ಸನಾತನ ಸಂಸ್ಥೆಯ ಮಾರ್ಗದರ್ಶಕಿ ಸಂಗೀತ ಶಶಿಧರ ಆಚಾರ್ಯ ಮಾತನಾಡಿ, ಧರ್ಮಾಚರಣೆ ಕೇವಲ ಕೇಳುವ, ಮಾತನಾಡುವ ವಿಷಯವಲ್ಲ. ಇಂದು ವಿಜ್ಞಾನ, ತಂತ್ರಜ್ಞಾನ ಎಲ್ಲ ಇದ್ದರೂ ನಮ್ಮ ಮನಸ್ಸು ಕಲುಷಿತವಾಗಿದೆ. ಹಬ್ಬ ಹರಿದಿನಗಳ ಆಚರಣೆ ಶಾಸ್ತ್ರೀಯವಾಗಿರದೆ ಕೇವಲ ಸ್ಟೇಟಸ್‌ಗೆ ಸೀಮಿತವಾಗಿದೆ. ಸ್ವಾರ್ಥ ಬಿಟ್ಟು ಸಮರ್ಪಣಾಭಾವದಿಂದ ರಾಷ್ಟ್ರ, ಧರ್ಮದ ರಕ್ಷಣೆಗಾಗಿ ಅಧರ್ಮದ ವಿರುದ್ಧ ಸಾಧನೆ ಮಾಡಿ ಕ್ಷಾತ್ರ, ಬ್ರಹ್ಮ ತೇಜಸ್ಸು ಹೆಚ್ಚಿಸಿಕೊಳ್ಳಬೇಕಾಗಿದೆ. ಸ್ವದೇಶೀ ವಸ್ತುಗಳ ಬಳಕೆ ಮಾಡುವ ಸಂಕಲ್ಪ ಮಾಡಿ ಸಂಘಟಿತರಾಗಿ ಧರ್ಮ ಶಿಕ್ಷಣ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಡಾ. ರವಿಕುಮಾರ್ ಮಾತನಾಡಿ, ನಾಮಜಪ, ಸತ್ಸೇವೆ, ಸತ್ಸಂಗ ಪ್ರೀತಿ, ಅಸ್ಟಾಂಗ ಸಾಧನೆಯಿಂದ ವ್ಯಷ್ಟಿ ಸಾಧನೆಯ ಜತೆಗೆ ಸಮಷ್ಟಿ ಸಾಧನೆ ಮೋಕ್ಷಕ್ಕೆ ಕಾರಣ. ನಾಮಜಪದ ಅನುಭೂತಿಗಾಗಿ ಸನಾತನ ಸಂಸ್ಥೆಯ ಸತ್ಸಂಗ ಕಾರ್ಯದಲ್ಲಿ ಸಹಭಾಗಿಗಳಾಗೋಣ ಎಂದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿ ಬಂದಾರಿನ ಲಾವಣ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹರ್ಷಿ ವೇದವ್ಯಾಸ ಮತ್ತು ಗುರುಪ್ರತಿಮೆಗಳ ಪೂಜೆ ನೆರವೇರಿಸಲಾಯಿತು.
ಗೋವಾದ ಪೋಂಡಾದಲ್ಲಿ ಕಳೆದ ಮೇ 17 ರಿಂದ 19 ರಂದು ನಡೆದ ಸಚ್ಚಿದಾನಂದ ಡಾ. ಜಯಂತ ಆಠವಲೆಯವರ ಜನ್ಮದಿನಾಚರಣೆಯ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ವೀಡಿಯೋ ಪ್ರದರ್ಶನ ಪ್ರಸಾರಿಸಲಾಯಿತು. ನಿವೃತ್ತ ಶಿಕ್ಷಕ ಕಾಂಚನದ ಸಾಂತಪ್ಪ ಗೌಡ ಮತ್ತು ಕಮಲಮ್ಮ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ರಾಮರಾಜ್ಯ ಸ್ಥಾಪನೆಗಾಗಿ ಸಾಮೂಹಿಕ ನಾಮಜಪ ಪಠಣ ನಡೆಯಿತು. ರಾಷ್ಟ್ರ ಮತ್ತು ಧರ್ಮ ಜಾಗೃತಿಯ ಬಗ್ಗೆ ಪ್ರದರ್ಶನ ಏರ್ಪಡಿಸಲಾಗಿತ್ತು.
ಅಕ್ಷತಾ ನಿರೂಪಿಸಿದ ಕಾರ್ಯಕ್ರಮದಲ್ಲಿ, ಹಿಂದೂ ಜನಜಾಗೃತಿ ಸಮಿತಿಯ ಅಕ್ಷಯ ರಾವ್ ವಂದಿಸಿದರು.