ಬಿಸಿ ರೋಡ್‌ನಲ್ಲಿ ವಿಶೇಷ ಧರ್ಮಜಾಗೃತಿ ಕಾರ್ಯಕ್ರಮ
Friday, August 22, 2025
ಬಂಟ್ವಾಳ: ಯೋಗ್ಯ ದಿಶೆಯಲ್ಲಿ ನಮ್ಮ ಜೀವನದ ಸಾರ್ಥಕ್ಯವನ್ನು ಮಾಡಿಕೊಳ್ಳಲು ನಾವು ಧರ್ಮಶಿಕ್ಷಣ ಪಡೆದು, ಸಾಧನೆಯನ್ನು ಮಾಡಬೇಕಾಗಿದೆ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತ ರಮಾನಂದ ಗೌಡ ಹೇಳಿದರು.
ಬಿ.ಸಿ ರೋಡಿನ ಪೊಲೀಸ್ ಲೈನ್‌ನಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸಭಾಗೃಹಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಡೆದ ವಿಶೇಷ ಧರ್ಮಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆತ್ಮ ಮತ್ತು ಪರಮಾತ್ಮನ ಸಂಬಂಧಕ್ಕಾಗಿ ಮಾಡುವ ನಿರಂತರ ಪ್ರಯತ್ನವೇ ಸಾಧನೆಯಾಗಿದೆ. ಭಗವಂತನಲ್ಲಿ ನಮ್ಮ ಇಚ್ಛೆ ಆಕಾಂಶೆಗಳನ್ನು ಪೂರೈಸಲು ಮಾಡುವ ಆರಾಧನೆಯನ್ನು ಸಕಾಮ ಸಾಧನೆ ಎಂದು ಹೇಳಲಾಗುತ್ತದೆ ಎಂದು ಅವರು ಹೇಳಿದರು.
ನಮ್ಮ ಸಾಧನೆಯ ಸಿದ್ದಿಗಾಗಿ ಭಗವಂತನಲ್ಲಿ ಏಕರೂಪವಾಗಲು ನಾವು ನಿಷ್ಕಾಮ ಕರ್ಮವನ್ನು ಮಾಡಬೇಕಾಗುತ್ತದೆ. ಹಿಂದಿನ ಕಾಲದಲ್ಲಿ ಗುರುಕುಲ ಶಿಕ್ಷಣದ ಮಾಧ್ಯಮದಿಂದ ಧರ್ಮ ಜ್ಞಾನವನ್ನು ನೀಡಲಾಗುತ್ತಿತ್ತು. ಇಂದಿನ ಕಾಲದ ದುರ್ಬಲ ಶಿಕ್ಷಣ ವ್ಯವಸ್ಥೆಯು ನಮ್ಮಲ್ಲಿ, ನಮ್ಮ ಮಕ್ಕಳಲ್ಲಿ ಧರ್ಮಶಿಕ್ಷಣ, ಸಾಧನೆ, ಸಂಸ್ಕಾರವನ್ನು ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಚಂದ್ರ ಮೊಗವೀರ್, ವಿಜಯ ಕುಮಾರ್ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರದ ಹಲವಾರು ಗಣ್ಯರು ಭಾಗಹಿಸಿದ್ದರು.
