
ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನದ ವತಿಯಿಂದ ಸಮುದ್ರ ಪೂಜೆ..!
Sunday, August 10, 2025
ಕುಂದಾಪುರ: ಇಲ್ಲಿನ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದ ವತಿಯಿಂದ ಮತ್ಸ್ಯ ಸಂಪತ್ತು ಹಾಗೂ ಪ್ರಾಕೃತಿಕ ವಿಕೋಪಗಳಿಂದ ಯಾವುದೇ ಅವಘಡಗಳು ಜರಗದಂತೆ ವರ್ಷಂಪ್ರತಿ ಜರುಗುವ ಸಮುದ್ರ ಪೂಜೆಯು ಕೋಡಿಯ ಸಮುದ್ರ ಕಿನಾರೆಯಲ್ಲಿ ವಿದ್ಯುಕ್ತವಾಗಿ ಶ್ರಾವಣ ಮಾಸದ ಹುಣ್ಣಿಮೆಯಂದು ಶನಿವಾರ ನೆರವೇರಿತು.
ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷರಾದ ಅಜಂತ ಖಾರ್ವಿ, ಉಪಾಧ್ಯಕ್ಷರಾದ ಪ್ರಕಾಶ್ ಆರ್. ಖಾರ್ವಿ, ಮೊಕ್ತೇಸರರಾದ ಆನಂದ್ ನಾಯ್ಕ್, ಪಾಂಡು ಸಾರಂಗ ಹಾಗೂ ದೇವಳದ ಮುಖ್ಯ ಅರ್ಚಕರಾದ ಸುಮಂತ್ ಭಟ್ ಪೂಜೆಯ ವಿಧಿವಿಧಾನಗಳನ್ನು ಸಾಂಗವಾಗಿ ನೆರವೇರಿಸಿದರು.
ಕಾರ್ಯಕ್ರಮದ ಉಸ್ತುವಾರಿಯನ್ನು ದೇವಸ್ಥಾನದ ಸಮಿತಿಯ ಸದಸ್ಯ ಸುನೀಲ್ ಖಾರ್ವಿ ತಲ್ಲೂರು ವಹಿಸಿದ್ದರು. ಕಾರ್ಯದರ್ಶಿ ನಾಮದೇವ್ ಖಾರ್ವಿ, ಖಜಾಂಚಿ ರಾಜು ನಾಯ್ಕ್ , ದೇವಸ್ಥಾನದ ಸಮಿತಿಯ ಸದಸ್ಯರು, ವಿದ್ಯಾರಂಗ ಮಿತ್ರ ಮಂಡಳಿಯ ಸದಸ್ಯರು, ನವರಾತ್ರಿ ಸಮಿತಿಯ ಮಂಜುಳಾ ಆರ್. ಖಾರ್ವಿ, ಮಹಾಕಾಳಿ ಮಹಿಳಾ ಮಂಡಳಿಯ ಅಧ್ಯಕ್ಷೆ ವಸಂತಿ ಸಾರಂಗ ಹಾಗೂ ಸಂಘದ ಸದಸ್ಯೆಯರ ಸಹಿತ ಹಲವಾರು ಸಮಾಜ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.