ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ. ರಾಘವೇಂದ್ರರಿಂದ ಕೇಂದ್ರ ಹಣಕಾಸು ಸಚಿವರ ಭೇಟಿ: ಮನವಿ ಸಲ್ಲಿಕೆ
ಸಚಿವರು ಅಪೇಕ್ಷಿಸಿದ ಮಾಹಿತಿಗಳನ್ನು ನೀಡಿದ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಬೈಂದೂರು ಭಾಗದ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿ ಅಗತ್ಯ ಅನುದಾನವನ್ನು ಬಿಡುಗಡೆ ಮಾಡುವಂತೆ ಕೋರಿ ಮನವಿಯನ್ನು ಸಲ್ಲಿಸಿದರು.
ಅಡಿಕೆ ಬೆಳೆಗಾರರ ಸಹಾಯಧನ ಬಿಡುಗಡೆ:
ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಯ ಮೂಲಕ ರಾಜ್ಯದ ಅಡಿಕೆ ಕೃಷಿ ಬೆಳೆಗಾರ ರೈತ ಸಮುದಾಯವು ಕೃಷಿ ಇಲಾಖೆಗಳ ನಡುವೆ ಸೇತುವೆಯಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಾಯೋಜಿತ ಯೋಜನೆಯಡಿಯಲ್ಲಿ ರೈತರುಗಳು ಈಗಾಗಲೇ ಮಂಜೂರಾದ ಕೃಷಿ ಸಂಸ್ಕರಣಾ ಘಟಕಕ್ಕೆ 50% ಸಬ್ಸಿಡಿ ಹಣವನ್ನು ಪಡೆದುಕೊಂಡಿದ್ದು, ಬಾಕಿ ಇರುವ ನಬಾರ್ಡ್ ಸಬ್ಸಿಡಿ ಹಣವನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಕೋರಿದರು.
ಕೊಲ್ಲೂರು ಮೂಕಾಂಬಿಕ ದೇವಸ್ಥಾನವನ್ನು ಪ್ರಸಾದ್ ಯೋಜನೆಯಡಿ ಅಭಿವೃದ್ಧಿಪಡಿಸುವುದು:
ಶ್ರೀ ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯವು ದಕ್ಷಿಣ ಭಾರತದ ಆಧ್ಯಾತ್ಮಿಕ ಕ್ಷೇತ್ರದ ಮೂಲಾಧಾರವಾಗಿದೆ. ಧಾರ್ಮಿಕ ಮಹತ್ವದ ಜೊತೆಗೆ, ಸುತ್ತಮುತ್ತಲಿನ ಪ್ರದೇಶವು ನೈಸರ್ಗಿಕ ಆಸ್ತಿಗಳಾದ ನದಿಗಳು, ಕಡಲ ತೀರಗಳು, ಗಿರಿಧಾಮಗಳು, ಹಿನ್ನೀರು ಮತ್ತು ಮುಂಬರುವ ವಾಯುನೆಲೆಗಳ ಗಮನಾರ್ಹ ಮಿಶ್ರಣವನ್ನು ನೀಡುವುದರ ಜೊತೆಗೆ ಇವೆಲ್ಲವೂ 50 ಕಿಲೋಮೀಟರ್ ವ್ಯಾಪ್ತಿಯಲ್ಲಿದ್ದು, ಭೌಗೋಳಿಕತೆ ಮತ್ತು ಆಧ್ಯಾತ್ಮಿಕತೆಯ ಸಮಗ್ರ ದೃಷ್ಟಿಯಿಂದ ಪ್ರವಾಸೋದ್ಯಮದ ಅಭಿವೃದ್ಧಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನವನ್ನು ಪ್ರವಾಸೋದ್ಯಮ ಸಚಿವಾಲಯದ ತೀರ್ಥಯಾತ್ರೆಯ ಮೂಲಸೌಕರ್ಯ ಅಭಿವೃದ್ಧಿಗಾಗಿ ‘ಪ್ರಸಾದ್ ಯೋಜನೆ’ಯಲ್ಲಿ ಸೇರಿಸಿ ಪ್ರವಾಸೋದ್ಯಮದ ಮೂಲಕ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಅಗತ್ಯ ಅನುದಾನವನ್ನು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು. ಸಂಸದ ರಾಘವೇಂದ್ರ ಕೊಲ್ಲೂರು ಕ್ಷೇತ್ರದ ಸಮಗ್ರ ಮಾಹಿತಿಗಳನ್ನು ಸಚಿವರಿಗೆ ನೀಡಿದರು.
ಸಿ.ಜಿ.ಎಚ್.ಎಸ್. ಆಸ್ಪತ್ರೆ ಕಾರ್ಯಾರಂಭ:
ಈ ಆಸ್ಪತ್ರೆ ಆರಂಭಕ್ಕಾಗಿ ಸೂಕ್ತ ಅನುದಾನ ಮತ್ತು ಸಿಬ್ಬಂದಿ ನೇಮಕ್ಕೆ ಮನವಿ ಮಾಡಿಕೊಂಡರು.
ಕರ್ನಾಟಕ ರಾಜ್ಯದ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು ಮತ್ತು ಅವರ ಕುಟುಂಬಗಳು ಸಿಜಿಎಚ್‌ಎಸ್ ಕ್ಷೇಮ ಕೇಂದ್ರವನ್ನು ಪ್ರಾರಂಭಿಸುವಂತೆ ಸಾಕಷ್ಟು ಮನವಿಯಗಳನ್ನು ಈ ಹಿಂದೆಯೇ ಸಲ್ಲಿಸಿದ್ದರು. ಈ ಕ್ಷೇಮ ಕೇಂದ್ರವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ತೆರೆಯುವಂತೆ ಸಂಸದ ಬಿ.ವೈ. ರಾಘವೇಂದ್ರರವರು ಕೇಂದ್ರ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡವನ್ನು ಹೇರಿದ್ದರು. ಅದರ ಫಲವಾಗಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕರ್ನಾಟಕದ ಶಿವಮೊಗ್ಗ, ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಸಿಜಿಎಚ್‌ಎಸ್ ಕ್ಷೇಮ ಕೇಂದ್ರಗಳ ಸ್ಥಾಪನೆಗೆ ಅನುಮೋದನೆ ನೀಡಿರುತ್ತದೆ. ಶಿವಮೊಗ್ಗ, ಮಂಗಳೂರು, ಮತ್ತು ಉಡುಪಿ ಜಿಲ್ಲೆಗಳ ಕ್ಷೇಮ ಕೇಂದ್ರಗಳಿಗೆ ಅಗತ್ಯ ಹುದ್ದೆಗಳ ಮಂಜೂರಾತಿ ಮತ್ತು ಸೂಕ್ತ ಅನುದಾನವನ್ನು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಯೊಂದು ವಿಷಯಗಳ ಬಗ್ಗೆಯೂ ಸೂಕ್ತ ವಿವರಣೆಯನ್ನು ಪಡೆದು, ಸಕಾರಾತ್ಮಕವಾಗಿ ಸ್ಪಂದಿಸಿ ಅಗತ್ಯ ಅನುದಾನವನ್ನು ನೀಡುವುದಾಗಿ ಭರವಸೆಯನ್ನು ನೀಡಿದರು.
ಕೃಷಿ, ಆರೋಗ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಸೌಲಭ್ಯಗಳನ್ನು ನೀಡಲು ಒಪ್ಪಿದ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯ ಸಚಿವ ಜೆ.ಪಿ. ನಡ್ಡಾ, ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರುಗಳಿಗೆ ಸಂಸದ ಬಿ.ವೈ. ರಾಘವೇಂದ್ರ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.