ಎಸ್‌ಐಟಿ ತನಿಖೆಗೆ ಬಿಜೆಪಿಯ ಸಂಪೂರ್ಣ ಬೆಂಬಲ ಇದೆ: ಸತೀಶ್ ಕುಂಪಲ

ಎಸ್‌ಐಟಿ ತನಿಖೆಗೆ ಬಿಜೆಪಿಯ ಸಂಪೂರ್ಣ ಬೆಂಬಲ ಇದೆ: ಸತೀಶ್ ಕುಂಪಲ


ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅನಾಥ ಶವಗಳನ್ನು ಹೂಳಿದ ವಿಚಾರಕ್ಕೆ ಸಂಬಂಧಿಸಿ ಅನಾಮಿಕನ ದೂರಿನ ಮೇರೆಗೆ ನಡೆಯುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ತನಿಖೆಗೆ ಬಿಜೆಪಿಯ ಸಂಪೂರ್ಣ ಬೆಂಬಲ ಇದೆ. ಆದರೆ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಎಡಪಂಥೀಯರ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ನಡೆಸುತ್ತಿರುವುದನ್ನು ತೀವ್ರವಾಗಿ ವಿರೋಧಿಸುವುದಾಗಿ ದ.ಕ. ಜಿಲ್ಲಾ ಬಿಜೆಪಿ ಹೇಳಿದೆ. ಕ್ಷೇತ್ರದ ಬಗ್ಗೆ ತೇಜೋವಧೆ ಮುಂದುವರಿದರೆ ಹಿಂದು ಸಮಾಜ ಜೊತೆಗೂಡಿ ಹೋರಾಟ ನಡೆಸುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.

ಮಂಗಳೂರಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ವಿರುದ್ಧ ಆರೋಪ ಬಂದಾಗ ಹಿಂದೆಯೂ ತನಿಖೆಯನ್ನು  ಬಿಜೆಪಿ ಬೆಂಬಲಿಸಿತ್ತು. ಈ ಬಾರಿಯೂ ಎಸ್‌ಐಟಿ ತನಿಖೆಗೆ ಬೆಂಬಲ ವ್ಯಕ್ತಪಡಿಸುತ್ತದೆ. ಆದರೆ ಎಸ್‌ಐಟಿ ತನಿಖೆ ವೇಳೆ ಹೊರಗಿನವರು ಕ್ಷೇತ್ರದ ಬಗ್ಗೆ ಅವಹೇಳನ  ಮಾಡುವುದನ್ನು ಎಷ್ಟು ಮಾತ್ರಕ್ಕೂ ಸಹಿಸಲು ಸಾಧ್ಯವಿಲ್ಲ. ವಿನಾ ಕಾರಣ ತೇಜೋವಧೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರ ಹಾಗೂ ಪೊಲೀಸ್  ಇಲಾಖೆಯನ್ನು ಆಗ್ರಹಿಸುವುದಾಗಿ ಅವರು ಹೇಳಿದರು.

ಅನಾಮಿಕನ ಮಂಪರು ಪರೀಕ್ಷೆ ಮಾಡಿಸಿ:

ಧರ್ಮಸ್ಥಳ ಗ್ರಾಮದಲ್ಲಿ ಅನಾಥ ಶವಗಳನ್ನು ಹೂಳಿದ್ದೇನೆ, ತನಿಖೆ ನಡೆಸಿ ಎನ್ನುವ ಅನಾಮಿಕ ವ್ಯಕ್ತಿ ಯಾರು ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಒಂದು ತಿಂಗಳ  ಹಿಂದೆ ನಿರ್ದಿಷ್ಟ ಸ್ಥಳಗಳಲ್ಲಿ ಅನಾಥ ಶವ ಹೂತಿದ್ದಾಗಿ ಹೇಳಿಕೆ ನೀಡಿದ್ದು, ಅದರಂತೆ ಎಸ್‌ಐಟಿ ಮಾರ್ಗದರ್ಶನದಲ್ಲಿ ಉತ್ಖನನ ನಡೆಯುತ್ತಿದೆ. ಆದರೆ ಆತನ ಆರೋ ಪದಲ್ಲಿ ಹುರುಳು ಇದ್ದಂತೆ ಕಾಣುತ್ತಿಲ್ಲ. ಆತ ಇನ್ನೂ 25 ಕಡೆ ಶವ ಹೂತಿದ್ದೇನೆ ಎಂದರೂ ತನಿಖೆ ನಡೆಸಲಿ, ಆದರೆ ಆತ ಯಾವ ಆಧಾರದಲ್ಲಿ ಆರೋಪ  ಮಾಡುತ್ತಿದ್ದಾನೆ ಎಂಬುದು ಸ್ಪಷ್ಟವಾಗಬೇಕು. ಹೀಗಾಗಿ ಆತನ ಮಂಪರು ಪರೀಕ್ಷೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಎಡಪಂಥೀಯ ಷಡ್ಯಂತರ:

ಎಸ್‌ಐಟಿ ತನಿಖೆ ಸಂದರ್ಭ ನಡೆದಿರುವ ಅಹಿತಕರ ಘಟನೆ ಹಾಗೂ ದೇವಸ್ಥಾನದ ಮೇಲೆ ತೇಜೋವಧೆ ಮಾಡುವುದರ ಹಿಂದೆ ಎಡಪಂಥೀಯರ ಷಡ್ಯಂತರ  ಕಂಡುಬರುತ್ತಿದೆ. ಎಡಪಂಥೀಯರ ಒತ್ತಾಯದ ಮೇರೆಗೆ ಧರ್ಮಸ್ಥಳ ಗ್ರಾಮದ ಕೇಸನ್ನು ಎಸ್‌ಐಟಿಗೆ ಹಸ್ತಾಂತರಿಸಿದ್ದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಎಸ್‌ಐಟಿ ತನಿಖೆಗಾಗಿ ತಮಿಳುನಾಡಿನ ಕಾಂಗ್ರೆಸ್ ಸಂಸದರೊಬ್ಬರು ತಮ್ಮ ಪಕ್ಷದ ವರಿಷ್ಠರ ಮೂಲಕ ಒತ್ತಡ ಹಾಕಿರುವ ಸಂಗತಿಗಳು ಕೇಳಿಬರುತ್ತಿದೆ. ಇದೆಲ್ಲವೂ ಹಿಂದುಗಳ ಶ್ರದ್ಧಾಕೇಂದ್ರಗಳನ್ನು ದಮನಿಸುವ ಷಡ್ಯಂತರದ ಭಾಗವೇ ಆಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಷಡ್ಯಂತರಗಳನ್ನು ಮಟ್ಟಹಾಕಲು  ಕೇಂದ್ರ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸುವ ಅಗತ್ಯವಿದೆ ಎಂದು ಅವರು ಹೇಳಿದರು. 

ಶಾಸಕರಾದ ವೇದವ್ಯಾಸ್ ಕಾಮತ್, ರಾಜೇಶ್ ನಾಯ್ಕ್, ಡಾ.ಭರತ್ ಶೆಟ್ಟಿ, ಪ್ರತಾಪ್‌ಸಿಂಹ ನಾಯಕ್, ಕಿಶೋರ್ ಕುಮಾರ್, ಮುಖಂಡರಾದ ಪ್ರೇಮಾನಂದ ಶೆಟ್ಟಿ, ವಿಕಾಸ್ ಪುತ್ತೂರು, ಮಹೇಶ್, ಅರುಣ್ ಶೇಟ್ ಮತ್ತಿತರರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article