ಹಬ್ಬದ ಕಾರ್ಯಕ್ರಮ: ಮೆರವಣಿಗೆಗೆ ನಿಯಮದಂತೆ ರಿಯಾಯಿತಿ ಅನುಮತಿ ನೀಡಲು ಆಗ್ರಹ

ಹಬ್ಬದ ಕಾರ್ಯಕ್ರಮ: ಮೆರವಣಿಗೆಗೆ ನಿಯಮದಂತೆ ರಿಯಾಯಿತಿ ಅನುಮತಿ ನೀಡಲು ಆಗ್ರಹ


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರ್ಷಂಪ್ರತಿಯಂತೆ ಹಬ್ಬದ ಕಾರ್ಯಕ್ರಮ, ಮೆರವಣಿಗೆ  ನಡೆಸಲು ನಿಯಮದಂತೆ ರಿಯಾಯಿತಿ ಮತ್ತು ಅನುಮತಿ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ವಿಶ್ವಹಿಂದು ಪರಿಷತ್ ಆಗ್ರಹಿಸಿದೆ.

ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ ವೇಳೆ ಪೊಲೀಸರು ಧ್ವನಿವರ್ಧಕ ಬಳಕೆಗೆ ಅನುಮತಿ ನೀಡದಿರುವ ಬಗ್ಗೆ ದೂರುಗಳಿವೆ. ರಾತ್ರಿ 10.30ರೊಳಗೆ ಕಾರ್ಯಕ್ರಮ ಮುಗಿಸಬೇಕು, ಧ್ವನಿವರ್ಧಕ ಬಳಕೆಗೆ ನಿಯಂತ್ರಣ ಹೇರಬೇಕು ಎಂಬ ಪೊಲೀಸರ ಆದೇಶ ಪಾಲನೆ ಕಷ್ಟಸಾಧ್ಯ. ಈ ಬಗ್ಗೆ ಗುರುವಾರ ದಕ್ಷಿಣ ಕನ್ನಡ ಜಿಲ್ಲಾಽಕಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಽಕಾರಿ ಅವರು ಮಧ್ಯಪ್ರವೇಶ ಮಾಡಿ ಈ ಹಿಂದೆ ನಡೆದು ಬಂದಂತೆ ಮುಂದಿನ ಗಣೇಶೋತ್ಸವ, ನವರಾತ್ರಿ, ದಸರಾ ಹಬ್ಬಗಳ ಆಚರಣೆಗೆ ಅನುಮತಿ ನೀಡಬೇಕು ಎಂದು ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ನೇಮ, ಕೋಲ, ಯಕ್ಷಗಾನ, ನಾಗಾರಾಧನೆ, ಕಂಬಳ, ಗಣೇಶೋತ್ಸವ, ಮೊಸರು ಕುಡಿಕೆ ಉತ್ಸವ, ದಸರಾ ಕಾರ್ಯಕ್ರಮ, ಹುಲಿವೇಷ  ಮತ್ತು ಹಲವು ಆಚರಣೆಗಳು ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗಗಳಾಗಿವೆ. ಈ ಆಚರಣೆಗಳಿಂದ ಕಲೆ ಹಾಗು ಸಂಸ್ಕೃತಿಗೆ ವಿಶೇಷ ಪ್ರೋತ್ಸಾಹ ದೊರೆತು ಕಲಾ ಪರಂಪರೆಗೆ ಆರ್ಥಿಕ ಆಶ್ರಯವು ಆಗಿದೆ. ಹೂವಿನ ವ್ಯಾಪಾರದಿಂದ ಹಿಡಿದು ದ್ವನಿವರ್ಧಕ, ಶಾಮಿಯಾನ, ಜಾತ್ರಾ ವ್ಯಾಪಾರ ಹೀಗೆ ಈ ಉತ್ಸವ  ಆಚರಣೆಗಳನ್ನೇ ನಂಬಿಕೊಂಡು ಅದೆಷ್ಟೋ ಜನರು ಜೀವನ ನಡೆಸುತ್ತಿದ್ದಾರೆ. ಆದರೆ ಇದೀಗ ಪೊಲೀಸ್ ಇಲಾಖೆ ಕಾನೂನಿನ ನೆಪದಲ್ಲಿ ಜಿಲ್ಲೆಯಲ್ಲಿ ಹಬ್ಬಗಳ ಆಚರಣೆಗೆ ಅಡ್ಡಿಉಂಟುಮಾಡಿದರೆ ಸಂಪ್ರದಾಯಿಕವಾಗಿ ಮಾಡಿಕೊಂಡು ಬಂದ ಆಚರಣೆಗಳನ್ನು ಅನುಷ್ಠಾನಗೊಳಿಸಲು ಕಷ್ಟವಾಗುತ್ತಿದೆ. ಸಾಂಪ್ರದಾಯಿಕ ಹಬ್ಬಗಳ ಆಚರಣೆಗೆ ಸಮಯ ಮಿತಿ ವಿಽಸಿರುವುದು ಸರಿಯಲ್ಲ ಎಂದರು.

ಇಷ್ಟು ವರ್ಷ ಕಾರ್ಯಕ್ರಮ ರಾತ್ರಿ ಮಾಡುವುದರಿಂದ ಯಾವುದೇ ಸಮಸ್ಯೆ ಆಗಿಲ್ಲ. ಜಿಲ್ಲೆಯಲ್ಲಿ ಹಿಂದೂ ಹಬ್ಬಗಳಾದ ಗಣೇಶೋತ್ಸವ, ಮೊಸರುಕುಡಿಕೆ, ದಸರಾ ಮುಂತಾದವುಗಳು ಪರಂಪರಾಗತವಾಗಿ ವೈಭವೋಪೇತವಾಗಿ ತಡ ರಾತ್ರಿಯವರೆಗೆ ಮೆರವಣಿಗೆ ಸಹಿತ ನಡೆಯುವ ಸಂಪ್ರದಾಯವಾಗಿದೆ. ಮಂಗಳೂರು ಗಣೇಶೋತ್ಸವ, ದಸರಾ ಮೆರವಣಿಗೆಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಸಂತೋಷದಿಂದ ಭಾಗಿಯಾಗುತ್ತಿದ್ದಾರೆ. ಈ ಕಾರ್ಯಕ್ರಮಗಳು  ಶಾಂತಿಯಿಂದ ನಡೆದುಕೊಂಡು ಬಂದಿದೆ. ಕಳೆದ ಮೊಸರು ಕುಡಿಕೆ ಸಂದರ್ಭ ಆದ ಕೆಲವು ಅಡಚಣೆ ಮತ್ತೆ ಮರುಕಳಿಸಬಾರದು. ಪೊಲೀಸರು ಸಾಮಾಜಿಕ ಸಂಪ್ರದಾಯಗಳನ್ನು ಪರಿಗಣಿಸಬೇಕು ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ ಜನರು ಕಾನೂನು ಪಾಲಿಸುವವರು ಮತ್ತು ಶಾಂತಿ ಪ್ರಿಯರು. ಆದರೂ ಅವರ ಭಾವನೆಯಂತೆ ನಡೆಯುವ ಸಂಪ್ರದಾಯಿಕ ಕಾರ್ಯಕ್ರಮಗಳಿಗೆ ತಡೆಯೋಡ್ಡಿದರೆ ಮನಸ್ಸಿನಲ್ಲಿ ಆಕ್ರೋಶ ಬೆಳೆಯುತ್ತದೆ. ಕಾರ್ಯಕ್ರಮ ಸಾಂಗವಾಗಿ ನಡೆದರೆ ಶಾಂತಿಭಂಗ ಉಂಟಾಗದು. ಡಿಜೆ ನಿಷೇಧಕ್ಕೆ ನಮ್ಮ ಬೆಂಬಲವಿದೆ ಎಂದರು.

ಷಡ್ಯಂತ್ರ ನಿಲ್ಲಲಿ..

ಹಬ್ಬಗಳ ಆಚರಣೆಗೆ ಧ್ವನಿವರ್ಧಕ ಸಮಸ್ಯೆ ಹಾಗೂ ಸಮಯದ ಮಿತಿ ವಿಽಸಿರುವ  ಬಗ್ಗೆ ಜಿಲ್ಲಾಧಿ ಕಾರಿ ಅವರು ಮಧ್ಯ ಪ್ರವೇಶಿಸಿ, ಪೊಲೀಸ್ ಇಲಾಖೆಯ ಜೊತೆ ಮಾತುಕತೆ ನಡೆಸಿ ಎಲ್ಲಾ ಧಾರ್ಮಿಕ ಉತ್ಸವ, ಮೆರವಣಿಗೆಗಳನ್ನು ಪ್ರತೀ ವರ್ಷದಂತೆ ಶಾಂತಿಯುತವಾಗಿ ಸಂಪ್ರದಾಯದಂತೆ ನಡೆಸಲು ಅನುಮತಿ ನೀಡಬೇಕು. ಶಬ್ದ ಮಾಲಿನ್ಯ ನಿಯಂತ್ರಣ ನಿಯಮಾವಳಿ 2000 ದ ನಿಯಮ 5(3) ರಲ್ಲಿ ಪ್ರದಾತ್ತವಾಗಿರುವ ಅಽಕಾರ ಉಪಯೋಗಿಸಿ ಜಿಲ್ಲೆಯಲ್ಲಿ ಆಗಸ್ಟ್ 27,28,29,30,31 ಹಾಗೂ ಸೆಪ್ಟೆಂಬರ್ 2 ರಂದು ಗಣೇಶೋತ್ಸವ ಹಾಗೂ ಮೆರವಣಿಗೆ ನಿಮಿತ್ತ ಹಾಗೂ ಅಕ್ಟೋಬರ್ 1,2,3 ರಂದು ದಸರಾ ನಿಮಿತ್ತ ರಿಯಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.

ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರ ಬಗ್ಗೆ ವಿಶ್ವಹಿಂದು ಪರಿಷತ್ ಈಗಾಗಲೇ ದೇವರ ಮೊರೆ ಹೋಗಿದೆ. ಒಂದು ವಾರಗಳ ಕಾಲ ಸಾಮೂಹಿಕ ಶಿವ ಪಂಚಾಕ್ಷರಿ ಮಂತ್ರ ಪಠಿಸಲಾಗುತ್ತಿದೆ. ಈ ಷಡ್ಯಂತ್ರ ನಿಲ್ಲಬೇಕು. ಎಸ್‌ಐಟಿ ತನಿಖೆ ಮೂಲಕ ಸತ್ಯಾಸತ್ಯತೆ ಹೊರಬರಲಿ. ಧರ್ಮಸ್ಥಳ ಪರವಾದ ಎಲ್ಲ ಹೋರಾಟಗಳನ್ನು ವಿಹಿಂಪ ಬೆಂಬಲಿಸುತ್ತಿದೆ ಎಂದು ಹೇಳಿದರು.

ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಪ್ರಾಂತ ಸಹ ಸೇವಾ ಪ್ರಮುಖ್ ಗೋಪಾಲ ಕುತ್ತಾರ್, ಜಿಲ್ಲಾ ಉಪಾಧ್ಯಕ್ಷ ಮನೋಹರ ಸುವರ್ಣ, ಪೊಳಲಿ ಗಿರಿಪ್ರಕಾಶ ತಂತ್ರಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article