ಉದ್ಯೋಗದ ಹಕ್ಕು ಮೂಲಭೂತ ಹಕ್ಕಾಗಬೇಕೆಂದು ಒತ್ತಾಯಿಸಿ ಡಿವೈಎಫ್ಐನಿಂದ ಸ್ವಾತಂತ್ರ್ಯ ದಿನದ ಸಂಕಲ್ಪ: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮೂಲೆಗಳಲ್ಲಿ ಪೋಸ್ಟರ್ ಚಳುವಳಿ
Friday, August 15, 2025
ಮಂಗಳೂರು: ಉದ್ಯೋಗದ ಹಕ್ಕು ಮೂಲಭೂತ ಹಕ್ಕಾಗಬೇಕೆಂದು ಒತ್ತಾಯಿಸಿ ಡಿವೈಎಫ್ಐನಿಂದ ಸ್ವಾತಂತ್ರ್ಯ ದಿನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮೂಲೆಗಳಲ್ಲಿ ಪೋಸ್ಟರ್ ಚಳುವಳಿ ನಡೆಸಿತು.
ಸಾಮ್ರಾಜ್ಯಶಾಹಿ ಬ್ರಿಟೀಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಆಶಯ ಭಾರತದ ನೆಲದಲ್ಲಿ ಶೋಷಣೆ ಮುಕ್ತ ಸಮಾಜವನ್ನು ನಿರ್ಮಿಸುವುದು. ಪ್ರತಿಯೊಬ್ಬರಿಗೂ ಭದ್ರತೆಯುಳ್ಳ ಬದುಕನ್ನು ಮರುಸ್ಥಾಪಿಸುವುದೇ ಆಗಿತ್ತು. ಆದರೆ ಅವರ ಆಶಯ ಈವರೆಗೂ ಈಡೇರಲಿಲ್ಲ. ದೇಶ ಸ್ವಾತಂತ್ರ್ಯಗೊಂಡ ನಂತರವೂ ಯುವಜನ ಸಮುದಾಯ ಭದ್ರತೆಯ ಉದ್ಯೋಗಗಳಿಲ್ಲದೆ ಅವರ ಬದುಕು ಅಂಚಿನೆಡೆಗೆ ತಳ್ಳಲ್ಪಟ್ಟಿದೆ. ಸದ್ಯ ದೇಶದ ಉದಾರಿಕರಣ, ಜಾಗತೀಕರಣ ನೀತಿಗಳು ಮತ್ತೆ ಈ ನೆಲದಲ್ಲಿ ವಿದೇಶಿ ಕಂಪೆನಿಗಳು ತಮ್ಮ ಹಿಡಿತವನ್ನು ಸಾಧಿಸಲು ಅವಕಾಶ ಮಾಡಿಕೊಟ್ಟಿದೆ.
ಕಾರ್ಪೊರೇಟ್ ಕಂಪೆನಿಗಳು ಮತ್ತೆ ಭಾರತ ದೇಶದ ಸಂಪತ್ತನ್ನು ಬಾಚಿಕೊಳ್ಳಲು ಮುಂದಾಗಿದ್ದು ಆಳುವ ಸರಕಾರಗಳು ಉದ್ಯೋಗ ಸೃಷ್ಟಿಯ ಹೆಸರಲ್ಲಿ ಎಲ್ಲವನ್ನೂ ವಿದೇಶಿ ಕಂಪೆನಿಗಳ, ಭಾರತದ ನೆಲದ ಬಂಡವಾಳಗಾರರ ತೆಕ್ಕೆಗೆ ಅರ್ಪಿಸುತ್ತಿದ್ದು ಇದು ಈ ದೇಶದ ನಾಗರೀಕರನ್ನು ಮತ್ತೆ ಗುಲಾಮಗಿರಿಯತ್ತ ಕೊಂಡೊಯ್ಯುತ್ತಿದೆ. ಇಂತಹ ನೀತಿಗಳು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರ ಆಶಯಕ್ಕೆ ಮತ್ತವರ ಕನಸಿನ ಭಾರತಕ್ಕೆ ವಿರುದ್ಧವಾದ ನಡೆಗಳು. ಆಳುವ ಸರಕಾರದ ತಪ್ಪಾದ ದೇಶ ವಿರೋಧಿ, ಜನವಿರೋಧಿ ನಡೆಗಳನ್ನು ಪ್ರಶ್ನಿಸಬೇಕಾಗಿದೆ.
ಡಿವೈಎಫ್ಐ ಉದ್ಯೋಗ ಸೃಷ್ಟಿಸಿ, ನಿರುದ್ಯೋಗದಿಂದ ರಕ್ಷಿಸಿ, ಉದ್ಯೋಗದ ಹಕ್ಕು ಮೂಲಭೂತ ಹಕ್ಕಾಗಬೇಕೆಂದು ಒತ್ತಾಯಿಸಿ ಸೆಪ್ಟೆಂಬರ್ ತಿಂಗಳ 7, 8, 9ರಂದು ನಡೆಯುವ ದ.ಕ ಜಿಲ್ಲಾ ಮಟ್ಟದ ಯುವಜನ ಜಾಥಾ ಪೋಸ್ಟರ್ಗಳನ್ನು ಎಕಕಾಲದಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸ್ವಾತಂತ್ರ್ಯ ಸಂಭ್ರಮಾಚರಣೆಯ ವೇಳೆ ಬಿಡುಗಡೆಗೊಳಿಸಿದೆ. ಡಿವೈಎಫ್ಐ ಕೈಗೆತ್ತಿಕೊಂಡಿರುವ ಈ ಹೋರಾಟಕ್ಕೆ ಹಲವು ಜನಪರ ಸಂಘಸಂಸ್ಥೆಗಳು, ಸಂಘಟನೆಗಳು ಬೆಂಬಲ ವ್ಯಕ್ತ ಪಡಿಸಿದೆ ಈ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದೆ.






















