ಧರ್ಮಸ್ಥಳ ಪ್ರಕರಣ-ಹೊಸ ಜಾಗದಲ್ಲಿ ಪತ್ತೆಯಾಗದ ಅಸ್ಥಿಪಂಜರ: ಶಾಲಾ ಬಾಲಕಿಯ ಹೂತುಹಾಕಿದ ಜಾಗದಲ್ಲಿ ಕಾರ್ಯಾಚರಣೆ

ಧರ್ಮಸ್ಥಳ ಪ್ರಕರಣ-ಹೊಸ ಜಾಗದಲ್ಲಿ ಪತ್ತೆಯಾಗದ ಅಸ್ಥಿಪಂಜರ: ಶಾಲಾ ಬಾಲಕಿಯ ಹೂತುಹಾಕಿದ ಜಾಗದಲ್ಲಿ ಕಾರ್ಯಾಚರಣೆ


ಮಂಗಳೂರು: ಧರ್ಮಸ್ಥಳ ಗ್ರಾಮದ ವಿವಿಧೆಡೆ ನೂರಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ದಳ (ಎಸ್‌ಐಟಿ) ಇಂದು ಕೂಡಾ 13ನೇ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿಲ್ಲ. ಬದಲಿಗೆದೂರುದಾರ ಸೂಚಿಸಿದ ಹೊಸ ಸ್ಥಳ ಬೋಳಿಯಾರ್ ಕಾಡಿನಲ್ಲಿ ಶೋಧ ನಡೆದು ಆಸ್ಥಿಪಂಜರದ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ.

ಧರ್ಮಸ್ಥಳ ಗ್ರಾಮದ ಬೊಳಿಯಾರ್ ಗೋಂಕ್ರತಾರ್ ಸಮೀಪಕ್ಕೆ ಸಾಕ್ಷಿ ದೂರುದಾರನೊಂದಿಗೆ  ಎಸ್‌ಐಟಿ ತಂಡ 1.15 ರಿಂದ ಸಂಜೆ 5.30 ಗಂಟೆಯವರೆಗೆ ಮಿನಿ ಜೆಸಿಬಿ ಮತ್ತು ಕಾರ್ಮಿಕ ಜೊತೆ ಸೇರಿ ಕಾರ್ಯಾಚರಣೆ ನಡೆಸಿದಾಗ ಯಾವುದೇ ಅಸ್ಥಿಪಂಜರ ಅವಶೇಷಗಳು ಪತ್ತೆಯಾಗಿಲ್ಲ. ಕಾರ್ಯಾಚರಣೆಯನ್ನು ಅಂತ್ಯ ಮಾಡಿ ಅಧಿಕಾರಿಗಳು ದೂರುದಾರನ ಜೊತೆ ವಾಪಸ್ ಮರಳಿದ್ದಾರೆ.

ದೂರುದಾರ ತಿಳಿಸಿದಂತೆ ಕಲ್ಲೇರಿಯ 500 ಮೀಟರ್ ದೂರದಲ್ಲಿ ಶಾಲಾ ಸಮವಸ್ತ್ರದಲ್ಲಿ ಬ್ಯಾಗ್ ಇದ್ದ ಬಾಲಕಿಯನ್ನು ಹೂತು ಹಾಕಿದ ಪ್ರಕರಣದ ಜಾಗದಲ್ಲಿಯೇ ನಡೆದ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ.

ಭದ್ರತೆಗೆ ಮನವಿ..:

ಸಾಕ್ಷಿದಾರನಾಗಿ ಬಂದಿರುವ ದೂರುದಾರನೊಬ್ಬ ಗನ್‌ಮ್ಯಾನ್ ಭದ್ರತೆಯನ್ನು ಕೇಳಿದ್ದಾನೆ ಎನ್ನಲಾಗುತ್ತಿದೆ. ಬುಧವಾರ ಸಂಜೆ ಧರ್ಮಸ್ಥಳದಲ್ಲಿ ನಡೆದ ಅಹಿತಕರ ಘಟೆಯ ಬಳಿಕ ದೂರುದಾರನಿಂದ ಈ ವಿಶೇಷ ಮನವಿ ಬಂದಿದೆ. ನನ್ನ ಮೇಲೂ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಗನ್‌ಮ್ಯಾನ್ ನೀಡಬೇಕೆಂದು ಎಸ್‌ಐಟಿಗೆ ಮನವಿ ಮಾಡಿದ್ದಾನೆ.

ಎಸ್‌ಐಟಿ ಕಚೇರಿಗೆ ದೂರುದಾರ:

ಎಸ್‌ಐಟಿ ಅಧಿಕಾರಿಗಳು ಧರ್ಮಸ್ಥಳ ಗ್ರಾಮದ ಬೊಳಿಯಾರ್ ಗೋಂಕ್ರತಾರ್ ಪ್ರದೇಶದಲ್ಲಿ ಸ್ಥಳ ಮಹಜರು ಪ್ರಕ್ರಿಯೆ ನಡೆಸುತ್ತಿರುವ ಮಧ್ಯೆಯೇ ಬೆಳ್ತಂಗಡಿ ಇಚಿಲಂಪಾಡಿ ನಿವಾಸಿ ಜಯಂತ್ ಟಿ. ಬೆಳ್ತಂಗಡಿ ಎಸ್ ಐ ಟಿ ಕಚೇರಿಗೆ ಆಗಮಿಸಿದ್ದಾರೆ. ಬೆಳ್ತಂಗಡಿ ಇಚಿಲಂಪಾಡಿ ನಿವಾಸಿ ಜಯಂತ್ ಎಂಬವರು ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಘಟನೆಗೆ ಸಂಬಂಧಿಸಿದಂತೆ ಈ ಹಿಂದೆ ತಾನು ಯುವತಿಯ ಮೃತದೇಹ ನೋಡಿರುವುದಾಗಿ ದೂರು ದಾಖಲಿಸಿದ್ದರು.

ದೂರಿನ ಹಿನ್ನೆಲೆ ಜಯಂತ್ ಟಿ. ಅವರನ್ನು ಕಚೇರಿಗೆ ಆಹ್ವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದು, ಅಧಿಕಾರಿಗಳು ಮಾಹಿತಿ ಕಲೆಹಾಕುವ ಸಾಧ್ಯತೆಯಿದೆ. ಜಯಂತ್ ಟಿ. ಅವರು ಎಸ್ ಐ ಟಿ ಬೆಳ್ತಂಗಡಿ ಅವರ ಸಲಹೆಯಂತೆ ಆ.4ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಅನಾಮಿಕ ದೂರುದಾರ ಗುರುತಿಸಿದ 12 ಸ್ಥಳದಲ್ಲಿ ಈಗಾಗಲೇ ಶೋಧ ನಡೆದಿದ್ದು, 13ನೇ ಸ್ಥಳದ ಶೋಧ ಇಂದು ನಡೆಯಲಿದೆ ಎನ್ನಲಾಗಿತ್ತು. ಆದರೆ ಇಂದು ಯಾವುದೇ ಶೋಧ ಕಾರ್ಯಾಚರಣೆ ನಡೆದಿಲ್ಲ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article