
ಎಬಿವಿಪಿಯಿಂದ ಮೈಸೂರು ಚಲೋ
ಮಂಗಳೂರು: ಮಹಾರಾಷ್ಟ್ರ ಪೊಲೀಸರು ಮೈಸೂರಿನಲ್ಲಿ ಡ್ರಗ್ಸ್ ತಯಾರಿಕಾ ಘಟಕನ್ನು ಪತ್ತೆ ಹಚ್ಚಿ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಇದು ರಾಜ್ಯ ಮತ್ತು ಕೇಂದ್ರ ಸರಕಾರಗಳ ಕಾನೂನು ಸುವ್ಯವಸ್ಥೆ ಮತ್ತು ಗುಪ್ತಚರ ಇಲಾಖೆಯ ಕಾರ್ಯಕ್ಷಮತೆಯ ಮೇಲೆ ಗಂಭೀರ ಪ್ರಶ್ನೆ ಹುಟ್ಟು ಹಾಕಿದೆ. ಈ ವೈಫಲ್ಯವನ್ನು ಖಂಡಿಸಿ ಮೈಸೂರು ಹಾಗೂ ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡುವ ಉದ್ದೇಶದಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಆ.12ರಂದು ಮೈಸೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳೂರು ವಿಭಾಗ ಸಂಚಾಲಕ ಸುವಿತ್ ಶೆಟ್ಟಿ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಹೊರ ವಲಯದಲ್ಲಿ ದೊಡ್ಡ ಪ್ರಮಾಣದ ಡ್ರಗ್ಸ್ ಫ್ಯಾಕ್ಟರಿ ಕಾರ್ಯನಿರ್ವಹಿಸುತ್ತಿದ್ದರೂ, ಸ್ಥಳೀಯಾಡಳಿತ, ಪೊಲೀಸ್ ಇಲಾಖೆ ಮತ್ತು ಗುಪ್ತಚರ ಸಂಸ್ಥೆಗಳಿಗೆ ಅರಿವಿಲ್ಲ ಎನ್ನುವುದು ಸಂಶಯವನ್ನು ಹುಟ್ಟು ಹಾಕಿದೆ. ಈಗಾಗಲೇ ಮಾದಕ ವ್ಯಸನವು ಯುವಜನತೆ, ವಿದ್ಯಾರ್ಥಿಗಳ ಭವಿಷ್ಯವನ್ನು ನಾಶ ಪಡಿಸುತ್ತಿದೆ. ಆದ್ದರಿಂದ ಎನ್ಡಿಪಿಎಸ್ ಮತ್ತು ಕೋಟ್ಪಾವನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಕಾಯ್ದೆಯಡಿ ಗರಿಷ್ಠ ಶಿಕ್ಷೆಗಳನ್ನು ವಿಧಿಸಬೇಕು. ಮೈಸೂರು ಡ್ರಗ್ಸ್ ಪತ್ತೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮೈಸೂರು ಚಲೋದಲ್ಲಿ ರಾಜ್ಯ ವಿವಿಧೆಡೆಯಿಂದ 10 ಸಾವಿರ ಮಂದಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಜಿಲ್ಲೆಯಿಂದಲೂ 2 ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.
ಪರಿಷತ್ ಪ್ರಮುಖರಾದ ಸಜಿತ್ ರೈ, ಶ್ರೀಲಕ್ಷ್ಮಿ ಶೆಟ್ಟಿ, ಮೋನಿಶ್ ತೂಮಿನಾಡು ಉಪಸ್ಥಿತರಿದ್ದರು.