ಮೂಡುಬಿದಿರೆಯ ಗಣೇಶೋತ್ಸವಕ್ಕೆ ಅದರದ್ದೇ ಆದ ಪರಂಪರೆಯಿದೆ: 62ನೇ ವರ್ಷದ ಗಣೋಶೋತ್ಸವಕ್ಕೆ ಚಾಲನೆ ನೀಡಿ ಡಾ. ಎಂ. ಮೋಹನ ಆಳ್ವ ಹೇಳಿಕೆ
Wednesday, August 27, 2025
ಮೂಡುಬಿದಿರೆ: ತಾಲೂಕಿನ ವಿವಿಧ 29 ಕಡೆಗಳಲ್ಲಿ ಶ್ರದ್ಧೆ, ಭಕ್ತಿಯಿಂದ ಗಣೇಶೋತ್ಸವ ನಡೆಯುತ್ತಿದೆ. ಆದರೆ ಅದಕ್ಕಿಂತ ವಿಭಿನ್ನವಾಗಿ ಮೂಡುಬಿದಿರೆ ಪೇಟೆಯಲ್ಲಿ ಕಳೆದ ಆರು ದಶಕಗಳಲ್ಲಿ ಆಚರಿಸಿಕೊಂಡು ಬರುತ್ತಿರುವ ಮೂಡುಬಿದಿರೆಯ ಗಣೇಶೊತ್ಸವಕ್ಕೆ ಅದರದ್ದೇ ಆದ ವಿಶೇಷವಾದ ಪರಂಪರೆ ಇದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದರು.
ಅವರು ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ಮೂಡುಬಿದಿರೆ ಆಶ್ರಯದಲ್ಲಿ ಸಮಾಜ ಮಂದಿರದಲ್ಲಿ ಐದು ದಿನಗಳ ಕಾಲ ನಡೆಯುವ 62ನೇ ವರ್ಷದ ಶ್ರೀ ಗಣೇಶೋತ್ಸವಕ್ಕೆ ಬುಧವಾರ ಬೆಳಗ್ಗೆ ದೀಪ ಬೆಳಗಿಸಿ ಚಾಲನೆ ನೀಡಿದರು.
ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಳದ ಮೊಕ್ತೇಸರ ವೇ.ಮೂ ಈಶ್ವರ ಭಟ್ ಪ್ರತಿಷ್ಠಾ ಪೂಜೆ ನೆರವೇರಿಸಿದರು.
ಟ್ರಸ್ಟ್ ನ ಅಧ್ಯಕ್ಷ ನಾರಾಯಣ ಪಿ.ಎಂ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಉಮಾನಾಥ ಎ.ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ ಎಂ., ಟ್ರಸ್ಟ್ ನ ನಿಕಟಪೂರ್ವ ಅಧ್ಯಕ್ಷ ಕೆ. ಶ್ರೀಪತಿ ಭಟ್, ಟ್ರಸ್ಟ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ. ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಜಾರಾಮ್ ನಾಗರಕಟ್ಟೆ ಕಾಯ೯ಕ್ರಮ ನಿರೂಪಿಸಿ, ವಂದಿಸಿದರು.
