ತಿಮರೋಡಿ ‘ಬಿಡುಗಡೆ’ಗೆ ದೇವಳದಲ್ಲಿ ಪ್ರಾರ್ಥನೆ
ತಿಮರೋಡಿ ವಿರುದ್ಧ ಬ್ರಹ್ಮಾವರ ಠಾಣಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಬಿ.ಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಹಿನ್ನಲೆಯಲ್ಲಿ ಅವರ ಮೇಲೆ ಪ್ರಕರಣ ದಾಖಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಹಿನ್ನಲೆಯಲ್ಲಿ ಅವರಿಗೆ ಅತೀ ಶೀಘ್ರದಲ್ಲಿ ಜಾಮೀನು ಸಿಗುವಂತೆ ಅಭಿನವ ಭಾರತ ಮಿತ್ರ ಮಂಡಳಿಯ ದಿನೇಶ್ ಜೈನ್, ನವೀನ್ ಕುಲಾಲ್, ಧನ್ಯ ಕುಮಾರ್ ಬೆಳಂದೂರು ಅವರ ನೇತೃತ್ವದಲ್ಲಿ ಪ್ರಾರ್ಥನೆ ಮಾಡಲಾಯಿತು. ಅರ್ಚಕ ಉದಯ ಭಟ್ ಪ್ರಾರ್ಥನೆ ನೆರವೇರಿಸಿದರು.
ಪೂಂಜಾ-ಸಂತೋಷ್ ವಿರುದ್ಧ ಕೇಸು ದಾಖಲಿಸಿ
ಹಲವು ವೇದಿಕೆಗಳಲ್ಲಿ ಬಿ.ಎಲ್ ಸಂತೋಷ್ ಅವರು ಮಹೇಶ್ ಶೆಟ್ಟಿ ತಿಮರೋಡಿ ಅವರಿಗಿಂತಲೂ ಹೆಚ್ಚಿನ ಶಬ್ದ ಪ್ರಯೋಗ ಮಾಡಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕೂಡಾ ಹಲವು ಬಾರಿ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಅವರಿಬ್ಬರ ಮೇಲೂ ಕೇಸು ದಾಖಲಾಗಬೇಕಿತ್ತು. ಯಾಕೆ ಮಾಡಿಲ್ಲ. ಕಾನೂನು ಎಲ್ಲರಿಗೂ ಒಂದೇ ಎಂದು ತಿಮರೋಡಿ ಅಭಿಮಾನಿಗಳು ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ದಿನೇಶ್ ಕುಮಾರ್ ಜೈನ್, ನವೀನ್ ಕುಲಾಲ್ ಅವರು ಮಾದ್ಯಮದೊಂದಿಗೆ ಮಾತನಾಡಿ, ಧರ್ಮಸ್ಥಳದಲ್ಲಿ ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿರುವ ಅತ್ಯಾಚಾರ, ಹತ್ಯೆ ಬಗ್ಗೆ ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಸೌಜನ್ಯನ ಹತ್ಯೆಯ ಆರೋಪಿಗಳು ಪತ್ತೆಯಾಗಬೇಕು ಹಾಗೂ ಅಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಗಳಿಗೆ ನ್ಯಾಯಕ್ಕಾಗಿ ತಿಮರೋಡಿ ನಿಜವಾದ ಹಿಂದೂ ಕಾರ್ಯಕರ್ತರಾಗಿ ಹೋರಾಟ ಮಾಡುತ್ತಿದ್ದಾರೆ.
ಹಿಂದು ಸಮಾಜವೂ ಅವರ ಹಿಂದೆ ನಿಂತಿದೆ. ಆದರೆ ಧರ್ಮಸ್ಥಳ ಕ್ಷೇತ್ರಕ್ಕೆ ಅಪಮಾನ ಎಸಗುತ್ತಿದ್ದಾರೆ ಎಂಬ ಗೊಂದಲ ಸೃಷ್ಟಿಸಿ, ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಕೂಡಾ ಎಸ್.ಐ.ಟಿ ತನಿಖೆಯನ್ನು ಸ್ವಾಗತಿಸಿದ್ದಾರೆ. ಈ ನಡುವೆ ವಿಘ್ನಸಂತೋಷಿಗಳು ತಿಮರೋಡಿ ಅವರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ತಿಮರೋಡಿ ಅವರನ್ನು ಬಂಧಿಸಲಾಗಿದೆ. ಅವರು ಶೀಘ್ರ ಬಿಡುಗಡೆಗೊಳ್ಳಬೇಕು. ಇಡೀ ಹಿಂದು ಸಮಾಜಕ್ಕೆ ಮತ್ತೆ ಅವರು ಶಕ್ತಿ ತುಂಬಬೇಕು. ಇಡೀ ಹಿಂದು ಸಮಾಜ ಅವರ ಜೊತೆಗಿದೆ ಎಂದು ತೋರಿಸುವ ನಿಟ್ಟಿನಲ್ಲಿ ನಾವು ಇವತ್ತು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ್ದೇವೆ ಎಂದು ಅವರು ಹೇಳಿದರು.