ಮೀಸಲಾತಿಯಲ್ಲಿ ಬ್ರಾಹ್ಮಣರಿಗೆ ಅನ್ಯಾಯವಾಗುತ್ತದೆ: ಶೇಷಶಯನ ಕಾರಿಂಜ

ಮೀಸಲಾತಿಯಲ್ಲಿ ಬ್ರಾಹ್ಮಣರಿಗೆ ಅನ್ಯಾಯವಾಗುತ್ತದೆ: ಶೇಷಶಯನ ಕಾರಿಂಜ


ಉಜಿರೆ: ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ಮೀಸಲಾತಿಯಿಲ್ಲ. ಮೀಸಲಾತಿಯಿಲ್ಲದೆ ಶೋಷಣೆಗೊಳಗಾಗುತ್ತಿರುವುದು ಬ್ರಾಹ್ಮಣ ಪಂಗಡ. ವಿಶೇಷ ಪ್ರತಿಭೆಯಿದ್ದರೂ ಮೀಸಲಾತಿ ನೀತಿಯಲ್ಲಿ ಬ್ರಾಹ್ಮಣರಿಗೆ ಅನ್ಯಾಯವಾಗುತ್ತಿದೆ. ಮೀಸಲಾತಿ ಹೊರತುಪಡಿಸಿ ಬ್ರಾಹ್ಮಣರು ಉದ್ಯೋಗ, ಉದ್ಯಮಗಳಲ್ಲಿ ವಿಶೇಷ ಸಾಧನೆ ಮಾಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಶೇಷಶಯನ ಕಾರಿಂಜ ಹೇಳಿದರು.

ಅವರು ಭಾನುವಾರ ಉಜಿರೆ ಅರಿಪ್ಪಾಡಿ ಮಠದ ಸಭಾಂಗಣದಲ್ಲಿ ನಡೆದ ಬೆಳ್ತಂಗಡಿ ತಾ. ತುಳು ಶಿವಳ್ಳಿ ಸಭಾ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಸ್ಕ್ಯಾನರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಮಕ್ಕಳು ಸಂಸ್ಕೃತಿ, ಸಂಸ್ಕಾರದಿಂದ ವಿಮುಖರಾಗುತ್ತಿದ್ದಾರೆ. ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ, ಕೆಪಿಸಿ ಪರೀಕ್ಷೆಗಳಲ್ಲಿ ಸಾಮಾನ್ಯ ಜ್ಞಾನ, ಅನುಭವ ಪಡೆಯಬೇಕು. ಮಕ್ಕಳಿಗೆ ಸಂಸ್ಕೃತಿ,ಸಂಸ್ಕಾರವನ್ನು ಹಿರಿಯರು ತಿಳಿಸಬೇಕು. ಸಾಧಕ ವಿದ್ಯಾರ್ಥಿಗಳ ಸನ್ಮಾನ ಇತರ ಸಾಧಕರಿಗೆ ಪ್ರೇರಣೆಯಾಗಬಲ್ಲುದು ಎಂದರು.

‘ಹರಿಹರಾನುಗ್ರಹ ಸಭಾಭವನ’ ಸಾಲ ಯೋಜನೆಗೆ ಆರಂಭಿಸಿದ ‘ಸಂಚಯನ ನಿಧಿ’ ಸಂಗ್ರಹಕ್ಕಾಗಿ ಬ್ಯಾಂಕ್ ಸ್ಕ್ಯಾನರನ್ನು ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ  ಬಿಡುಗಡೆಗೊಳಿಸಿದರು.

ತಾಲೂಕು ತುಳು ಶಿವಳ್ಳಿ ಗೌರವಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಶುಭಾಶಂಸನೆಗೈದರು. ಅಧ್ಯಕ್ಷತೆ ವಹಿಸಿದ್ದ ರಾಜಪ್ರಸಾದ್ ಪೋಲ್ನಾಯ ಸಮಾಜದ ವಿದ್ಯಾರ್ಥಿಗಳು ವಿಶೇಷ ಸಾಧನೆಗೈದು ಸಮಾಜದ ಆಸ್ತಿಯಾಗಿ ಬೆಳೆದು ಇತರರಿಗೆ ಪ್ರೇರಣೆಯಾಗಬೇಕು. ಸಂಘದ ಮೇಲೆ ಪ್ರೀತಿ, ವಿಶ್ವಾಸ, ಅಭಿಮಾನದಿಂದ ಪ್ರೋತ್ಸಾಹಿಸಿ, ಮುನ್ನಡೆಸಿ ಎಂದರು.

ಸಾಧಕರ ಸನ್ಮಾನ:

ಇದೆ ಸಂದರ್ಭದಲ್ಲಿ ಕಳೆದ ಸಾಲಿನ ಅಂತಿಮ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 13 ಮಂದಿ, ಪಿಯುಸಿ ಪರೀಕ್ಷೆಯಲ್ಲಿ 14 ಮಂದಿ, ಪದವಿ ಪರೀಕ್ಷೆಯಲ್ಲಿ 10 ಮಂದಿ, ಸ್ನಾತಕೋತ್ತರ   ಪರೀಕ್ಷೆಯಲ್ಲಿ 6 ಮಂದಿ ಹಾಗೂ ಇತರ ವಿಭಾಗಗಳಲ್ಲಿ ವಿಶೇಷ ಸಾಧನೆಗೈದ ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 47 ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಗೌರವಿಸಲಾಯಿತು.

ಸಮಾಜದಲ್ಲಿ ವಿಶೇಷ ಸಾಧನೆಗೈದ ಅಭ್ಯಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕಾರ್ತಿಕೇಯ ಬೈಪಾಡಿತ್ತಾಯ, ವಿದ್ವತ್ ಪ.ಪೂ. ಕಾಲೇಜು ಸ್ಥಾಪಕ ಟ್ರಸ್ಟಿ ಕಾಶಿನಾಥ್ ಕಂಗಿನ್ನಾಯ, ದೆಹಲಿಯ ಭಾರತೀಯ ಸಶಸ್ತ್ರ ಸೇನೆಯ ನಿವೃತ್ತ ವೈದ್ಯಾಧಿಕಾರಿ ಡಾ. ಯು.ಪಿ. ರತ್ನಾಕರ್ ಹಾಗೂ ಮಂಗಳೂರು ಬಲ್ಮಠ ಸ.ಪ.ಪೂ. ಕಾಲೇಜು ನಿವೃತ್ತ ಶಿಕ್ಷಕ ಮುರಳಿಕೃಷ್ಣ ಆಚಾರ್ ಅವರ ನ್ನು ಸನ್ಮಾನ ಪತ್ರ ಸಹಿತ ಸನ್ಮಾನಿಸಿ ಅಭಿನಂದಿಸಲಾಯಿತು.

ಅಕ್ಷತಾ ಹೆಬ್ಬಾರ್, ಸೂರ್ಯನಾರಾಯಣ ಮುರುಡಿತ್ತಾಯ, ಶ್ರೀನಿವಾಸ ತಂತ್ರಿ, ಸುಧೀರ್ ಕುಮಾರ್, ಪ್ರಕಾಶ್ ಬನ್ನಿಂತಾಯ, ಮನೋಹರ ರಾವ್, ಗಿರೀಶ್ ಕುದ್ರೆನ್ತಾಯ ಪ್ರತಿಭಾ ಪುರಸ್ಕೃತರು ಹಾಗು ಸಾಧಕರನ್ನು ಪರಿಚಯಿಸಿದರು.

ವೇದಿಕೆಯಲ್ಲಿ ತಾಲೂಕು ಮಹಿಳಾ ಘಟಕ ಗೌರವಾಧ್ಯಕ್ಷೆ ಸ್ವರ್ಣ ಶ್ರೀರಂಗ ನೂರಿತ್ತಾಯ, ಶ್ರೀ ಜನಾರ್ದನ ಸೊಸೈಟಿ ಅಧ್ಯಕ್ಷ ಗಂಗಾಧರ ರಾವ್ ಎಸ್. ಕೆವುಡೇಲು, ಅಯ್ಯಪ್ಪ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ, ಗಿರಿರಾಜ ಬಾರಿತ್ತಾಯ, ಡಾ. ಶ್ರೀಪತಿ ಆರ್ಮುಡತ್ತಾಯ, ರಾಘವೇಂದ್ರ ಭಾಂಗಿಣ್ಣಾಯ, ತಿಲಕ ಕೋರ್ನ್ಗಿನ್ನಾಯ, ಸುಧೀರ್ ಕುಮಾರ್, ಪ್ರಶಾಂತ್ ರಾವ್, ವಸಂತ ಮಂಜಿತ್ತಾಯ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಮುರಳಿಕೃಷ್ಣ ಆಚಾರ್ ಮತ್ತು ದುರ್ಗಾಪ್ರಸಾದ್ ಕೆರ್ಮುಣ್ಣಾಯ ನಿರೂಪಿಸಿದರು. ಉಪಾಧ್ಯಕ್ಷ ಅಶೋಕಕುಮಾರ್ ಭಾಂಗಿಣ್ಣಾಯ ವಂದಿಸಿದರು. 


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article