ಸತ್ಯ, ಪ್ರಾಮಾಣಿಕತೆಯ ಬದುಕಿನಲ್ಲಿ ಪಾಠದ ಜೊತೆ ಆಟವಿರಲಿ: ವೀಣಾ ಬನ್ನಂಜೆ

ಸತ್ಯ, ಪ್ರಾಮಾಣಿಕತೆಯ ಬದುಕಿನಲ್ಲಿ ಪಾಠದ ಜೊತೆ ಆಟವಿರಲಿ: ವೀಣಾ ಬನ್ನಂಜೆ


ಕಟೀಲು: ಸತ್ಯ, ಪ್ರಾಮಾಣಿಕತೆಯ ಬದುಕಿನಲ್ಲಿ ಯಾವತ್ತಿಗೂ ಗೆಲುವು ಇರುತ್ತದೆ ಎಂದು ಖ್ಯಾತ ಚಿಂತಕಿ ವೀಣಾ ಬನ್ನಂಜೆ ಹೇಳಿದರು.

ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ವಿದ್ಯಾ ಸಂಸ್ಥೆಗಳ ಸಂಯೋಜನೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು.

ಕಾಲ ಕೆಟ್ಟಿದೆ ಎಂದು ಪುರಂದರದಾಸರ ಕಾಲದಿಂದಲೂ ಹೇಳುತ್ತ ಬಂದಿದ್ದಾರೆ, ಕಾಲ ಕೆಟ್ಟಿಲ್ಲ. ಕಾಲಕಾಲಕ್ಕೆ ಬದಲಾವಣೆ ಆಗುತ್ತ ಹೋಗುತ್ತದೆ. ಇವತ್ತಿನ ಬದಲಾವಣೆಗಳು ಮೈಮೇಲೆ ಬಂದು ದಾಳಿ ಮಾಡುತ್ತಿವೆ. ಈ ಎಚ್ಚರ ನಮ್ಮಲ್ಲಿರಬೇಕು.

ಪಾಠದಷ್ಟೇ ಆಟವೂ ಮುಖ್ಯ. ಪರೀಕ್ಷೆಯಲ್ಲಿ ಅನುತ್ತೀರ್ಣನಾದೆನೆಂದು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿರುವುದು ಸೋಲನ್ನು ಸ್ವೀಕರಿಸುವ ಗುಣವನ್ನು ಕಲಿಸದೆ ಇರುವ ಕಾರಣಕ್ಕಾಗಿ. ಆಟಗಳಲ್ಲಿ ಇಂದು ಸೋತವ ನಾಳೆ ಗೆಲ್ಲುತ್ತೇನೆಂಬ ಆತ್ಮವಿಶ್ವಾಸದಿಂದ ಮತ್ತೆ ಆಟವಾಡುತ್ತಾನೆ. ಸೋಲೇ ಅಂತಿಮವಲ್ಲ, ಸೋಲು ಸಹಜ ಎನ್ನುವ ಮನಸ್ಥಿತಿ ಮೂಡಿಸಬೇಕು. ಪಠ್ಯದ ಪರೀಕ್ಷೆಯೂ ಒಂದು ಆಟ ಎಂದು ಎಂದು ಭಾವಿಸುವಂತೆ ದಿನಂಪ್ರತಿ ಮಕ್ಕಳನ್ನು ಆಟವಾಡಲು ಬಿಡಬೇಕು. ಬದಲಾಗಿ ಓದು ಓದು ಎಂದು ಕಟ್ಟಿಹಾಕಬಾರದು. ಆಟವೆಂದರೆ ಕ್ರಿಕೆಟ್, ಕಬಡ್ಡಿಯಂತಹ ಜನಪ್ರಿಯ ಆಟಗಳಷ್ಟೇ ಅಲ್ಲ. ರಮ್ಮಿ, ಇಸ್ಪೀಟು, ಗನ್ ಹಿಡಿದು ಹಿಂಸೆಯ ಮನಸ್ಥಿತಿಯನ್ನು ಬೆಳೆಸುವ, ಆನ್‌ಲೈನ್ ಆಟಗಳಲ್ಲ. ಮರಕೋತಿಯಾಟ, ಚೆನ್ನಮನೆ, ಕಂಬದ ಆಟ, ದಿಂಬಿನ ಆಟ, ಕಣ್ಣಮುಚ್ಚಾಲೆಯಾಟ ಹೀಗೆ ಇವತ್ತು ಹೆಸರೇ ಗೊತ್ತಿಲ್ಲದ ಅನೇಕ ಆಟಗಳಿದ್ದವು. ಆಟವಿಲ್ಲದ ಪಾಠ ವ್ಯಾಪಕವಾಗಿ ಹರಡಿರುವ ರೋಗ ಎನ್ನುವುದನ್ನು ಶಾಲಾಕಾಲೇಜುಗಳು, ಶಿಕ್ಷಕರು, ಹೆತ್ತವರು ಚಿಂತಿಸಬೇಕಾಗಿದೆ ಎಂದರು.

ಸತ್ಯವನ್ನೇ ಹೇಳಿದರೆ ಒಮ್ಮೆ ಪೆಟ್ಟು ತಿನ್ನಬಹುದು. ಆದರೆ ಸುಳ್ಳು ಹೇಳುವವನು ಯಾವಾಗಲೂ ಹೊಡೆಸಿಕೊಳ್ಳುತ್ತಾನೆ, ಕೋಟಿ ಕೋಟಿ ಹಣಮಾಡಿದವರೇ ದೊಡ್ಡವರು ಅಲ್ಲ. ಅಂಬಾನಿ, ಬಿಲ್ ಗೇಟ್ಸ್ ಮಾದರಿಗಳನ್ನು ತಲೆಗೆ ತುಂಬಿಸಿಕೊಂಡಿದ್ದೇವೆ. ಸುಧಾಮ, ಪ್ರಹ್ಲಾದ, ಅರ್ಜುನನಂತಹ ಪ್ರಾಮಾಣಿಕರು, ಸತ್ಯನಿಷ್ಟರು, ಧರ್ಮನಿಷ್ಟರು ನಮಗೆ ಮಾದರಿಯಾಗಬೇಕು ಎಮದು ಹೇಳಿದರು.

ಬದುಕು ಇರುವುದೇ ತಪ್ಪು ಮಾಡಿ ತಿದ್ದಿಕೊಳ್ಳಲಿಕ್ಕೆ. ತಪ್ಪು ಮಾಡಿ ಎಡವಿಕೊಳ್ಳುವುದೇ ಬದುಕು. ಭಗವಂತನ ಇಚ್ಛೆಯಂತೆಯೇ ನಮ್ಮ ಬದುಕು. ದಿನಂಪ್ರತಿ ಒಳ್ಳೆಯದಾಗಲಿ, ನನ್ನ ಕಡೆಯಿಂದ ತಪ್ಪನ್ನು ಮಾಡಿಸದೆ ಇರಲಿ. ಒಳಿತಿನ ಕಡೆಗೆ ನಡೆಸುವಂತೆ ಮಾಡಿ ಎಂದು ಶರಣಾಗತಿಯಿಂದ ಬೆಳಿಗ್ಗೆದ್ದ ತಕ್ಷಣ ಕಣ್ಣನ್ನೇ ದೇವರಿಗೆ ಹಚ್ಚುವ ದೀಪ ಎಂದು ಭಾವಿಸಿ ಪ್ರಾರ್ಥಿಸಿದರೆ ಯಶಸ್ಸು, ಗೆಲುವು ಖಂಡಿತವಾಗಿ ಸಾಧ್ಯ ಎಂಬ ನಂಬಿಕೆ ನಮ್ಮಲ್ಲಿರಲಿ ಎಂದು ವೀಣಾ ಬನ್ನಂಜೆ ಹೇಳಿದರು.

ಗೂಗಲ್ ಎಲ್ಲವನ್ನೂ ತಿಳಿಸುವ ಸತ್ಯವಲ್ಲ. ಅದು ಗೂ ಗಳ್ಳ. ಒಬ್ಬನ ಅಭಿಪ್ರಾಯಕ್ಕೆ ಹತ್ತು ಮಂದಿ ಹತ್ತು ಅಭಿಪ್ರಾಯಗಳನ್ನು ಹೇಳುತ್ತಾರೆ. ಸುಳ್ಳುಗಳೆ ತುಂಬಿರುತ್ತವೆ. ತಪ್ಪು ಒಪ್ಪನ್ನು ಕೇಳುವ ಜೀವಂತ ಸಂಬಂಧ ಗುರುವಿನಲ್ಲಿ ಇರುತ್ತದೆ. ಗುರುಗಳ ಮಾತಿನಲ್ಲಿ ಅವರ ಸಂಶೋಧನೆ, ಅಧ್ಯಯನದಲ್ಲಿ ಕಂಡ ಸತ್ಯವಿರುತ್ತದೆ. ಜಗತ್ತಿನ ಎಲ್ಲ ದೋಷಗಳು ನಾಳೆಯ ಒಳಿತಿಗಾಗಿ ಹಾದಿ ಎಂಬ ಆಶಾವಾದ ನನ್ನದು ಎಂದು ಅವರು ಹೇಳಿದರು.

ವೀಣಾ ಬನ್ನಂಜೆ ಅವರನ್ನು ಶಿಕ್ಷಣ ಸಂಸ್ಥೆಗಳ ವತಿಯಿಂದ ಗೌರವಿಸಲಾಯಿತು.

ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಕಮಲಾದೇವಿಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಸದಾನಂದ ಆಸ್ರಣ್ಣ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ. ವಿಜಯ್ ವಿ, ಕುಸುಮಾವತಿ, ರಾಜಶೇಖರ್, ಗಿರೀಶ್ ತಂತ್ರಿ, ಸರೋಜಿನಿ, ಚಂದ್ರಶೇಖರ್ ಭಟ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಕಯ್ಯ ಸಾಲಿಯಾನ್, ಶಿಕ್ಷಕ ರಕ್ಷಕ ಸಂಘಗಳ  ಶುಭಲತಾ ಶೆಟ್ಟಿ, ಗ್ರೆಗರಿ ಸಿಕ್ವೇರ, ಅನಿತಾ, ಪ್ರಕಾಶ್ ಆಚಾರ್ಯ, ರಮೇಶ್ ಕೆ.ಜಿ, ಜಯರಾಮ್ ಉಪಸ್ಥಿತರಿದ್ದರು.

ಸ್ಪರ್ಧಾ ವಿಜೇತ ಶಿಕ್ಷಕರಿಗೆ ಬಹುಮಾನ ನೀಡಲಾಯಿತು. ಸೃಷ್ಟಿ ಶೆಟ್ಟಿ ಸ್ವಾಗತಿಸಿ, ವೈಷ್ಣವಿ ಭಟ್ ಪರಿಚಯಿಸಿದರು. ಶಿವಮನ್ಯು ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article