ಮದ್ದೂರು ಪ್ರಕರಣ: ಸಮಗ್ರ ತನಿಖೆಗೆ ಎನ್ಐಗೆ ಒಪ್ಪಿಸಲು ವಿಹೆಚ್ಪಿ ಆಗ್ರಹ
Friday, September 12, 2025
ಮಂಗಳೂರು: ಮದ್ದೂರಿನ ಗಣೇಶ ವಿಸರ್ಜನೆ ಸಮಯದಲ್ಲಿ ನಡೆದ ಕಲ್ಲುತೂರಾಟದ ವಿರುದ್ಧ ಹಾಗೂ ರಾಜ್ಯಾದ್ಯಂತ ಗಣೇಶ ವಿಸರ್ಜನೆಗೆ ತಡೆ ಒಡ್ಡಿರುವುದು ಹಾಗೂ ಪ್ರಾಂತ್ಯದ ಅನೇಕ ಅಧಿಕಾರಿಗಳನ್ನು ವಿವಿಧ ಜಿಲ್ಲೆಗಳ ಪ್ರವೇಶಕ್ಕೆ ನಿಷೇಧ ಒಡ್ಡಿರುವುದನ್ನು ಖಂಡಿಸಿ ಮಂಗಳೂರಿನ ಮಿನಿ ವಿಧಾನ ಸೌದದ ಎದುರು ಬೃಹತ್ ಪ್ರತಿಭಟನೆ ನಡೆಯಿತು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಘಟನೆಯ ಸಮಗ್ರ ತನಿಖೆಗಾಗಿ ಪ್ರಕರಣವನ್ನು ಎನ್ಐಎ ಗೆ ಒಪ್ಪಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಯುವ ವಕೀಲ ಸತೀಶ ಧರ್ಮಸ್ಥಳ, ಮದ್ದೂರಿನಲ್ಲಿ ನಡೆದ ಘಟನೆ ಖಂಡನೀಯ. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಲೇಬೇಕು. ಪಿಎ-ಐ ಮತೀಯವಾದಿಗಳಿಂದ ಈ ಕೃತ್ಯ ನಡೆದಿರುವ ಸಾಧ್ಯತೆ ಇದ್ದು, ಸಮಗ್ರ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯ ಎಂದರು.
ಈ ಸಮಾಜಕ್ಕೆ, ಧರ್ಮಕ್ಕೆ ಅಪತಾರವಾಗುವುದನ್ನು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಎಂದೂ ಸಹಿಸುವುದಿಲ್ಲ. ಸಮಾಜಕ್ಕೆ, ಹಿಂದೂ ಸಂಸ್ಕೃತಿಗೆ ಎದುರಾಗುವ ಸವಾಲುಗಳಿಗೆ ಎದೆಯೊಡ್ಡಲು ನಾವು ಸಿದ್ಧರಿದ್ದೇವೆ ಎಂದವರು ಹೇಳಿದರು.
ವಿಶ್ವ ಹಿಂದೂ ಪರಿಷತ್ ದ.ಕ.ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ, ಪ್ರಮುಖರಾದ ಶಿವಾನಂದ ಮೆಂಡನ್, ಗೋಪಾಲ್ ಕುತ್ತಾರ್,ಭುಜಂಗ ಕುಲಾಲ್. ಪೊಳಲಿ ಗಿರಿಪ್ರಕಾಶ್ ತಂತ್ರಿ, ರವಿ ಅಸೈಗೋಳಿ, ನವೀನ್ ಮೂಡುಶೆಡ್ಡೆ, ದೀಪಕ್ ಮರೋಳಿ ಮತ್ತಿತರರು ಉಪಸ್ಥಿತರಿದ್ದರು.



