ಕರಾವಳಿಯಲ್ಲಿ ಸಂಜೆ ಸಾಧಾರಣ ಮಳೆ
ಮಂಗಳೂರು: ಕರಾವಳಿಯಲ್ಲಿ ಸೋಮವಾರ ಹಲವಡೆ ಹಗುರದಿಂದ ಮಳೆಯಾಗಿದೆ. ದ.ಕ. ಜಿಲ್ಲೆಯಾದ್ಯಂತ ಇಡೀ ದಿನ ಬಿಸಿಲು ಸಹಿತ ಅಲ್ಪ ಮಳೆ ಸುರಿದಿದೆ. ಕೆಲವು ದಿನಗಳಿಂದ ಮಳೆ ದೂರವಾಗಿದ್ದು, ಈಗ ಮತ್ತೆ ಎಲ್ಲೆಡೆ ಮಳೆಯ ವಾತಾವರಣ ಕಂಡುಬಂದಿದೆ.
ದ.ಕ. ಜಿಲ್ಲೆಯ ಗ್ರಾಮಿಣ ಭಾಗದಲ್ಲಿ ಸೋಮವಾರ ನಸುಕಿನ ಜಾವದಿಂದಲೇ ಜಿಟಿಜಿಟಿ ಮಳೆ ಕಾಣಿಸಿತ್ತು. ಬೆಳಗ್ಗೆ ಸ್ವಲ್ಪ ಹೊತ್ತು ಮಳೆಗೆ ಬಿಡುವು ಹೊರತುಪಡಿಸಿದರೆ ಇಡೀ ದಿನ ಬಿಸಿಲೂ ಇತ್ತು. ಗ್ರಾಮಾಂತರ ಪ್ರದೇಶದಲ್ಲಿ ಅಷ್ಟಾಗಿ ನಿರಂತರ ಮಳೆಯಾಗದಿದ್ದರೂ ಮಂಗಳೂರಿನಲ್ಲಿ ಸಂಜೆ ವರೆಗೆ ಬಿಡದೆ ಮಳೆ ಸುರಿದಿದೆ. ದ.ಕ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗಿನ ಮಾಹಿತಿಯಂತೆ ಕಳೆದ 24 ಗಂಟೆಗಳಲ್ಲಿ 7.1ಮಿಮಿ ಮಳೆ ದಾಖಲಾಗಿತು.
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಬಿಟ್ಟು ಬಿಟ್ಟು ದಿನದಲ್ಲಿ 2, 3 ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕರಾವಳಿ ತೀರ ಭಾಗಗಳಲ್ಲಿ ಸ್ವಲ್ಪ ಜಾಸ್ತಿ ಇರಲಿದೆ. ಈಗಿನಂತೆ ಅ.3ರ ತನಕ ಈ ಸಾಮಾನ್ಯ ಮಳೆ ಮುಂದುವರಿಯುವ ಸಾಧ್ಯತೆಗಳಿವೆ. ಬಂಗಾಳಕೊಲ್ಲಿಯ ಒಡಿಸ್ಸಾ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಗಾಳಿ ಚಲಿಸುವ ಪಥದ ನಿಖರತೆ ಇನ್ನೂ ಸ್ಪಷ್ಟವಾಗಿಲ್ಲ. ರಾಜ್ಯದ ಕರಾವಳಿ ಭಾಗದಲ್ಲಿ ಒಂದು ವಾರದ ಕಾಲ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.