ಮನೆಯಲ್ಲಿ ಚಿನ್ನಾಭರಣ ಕಳ್ಳತನ
Monday, October 27, 2025
ಕಾಸರಗೋಡು: ಗಲ್ಫ್ ಉದ್ಯೋಗಿಯ ಮನೆಯಿಂದ 20 ಪವನ್ ಚಿನ್ನಾಭರಣ ಕಳವುಗೈದ ಘಟನೆ ಪೆರ್ಮುದೆ ಸಮೀಪದ ಕುಂಬಳೆ ಠಾಣಾ ವ್ಯಾಪ್ತಿಯ ಪೆರಿಯಡ್ಕ ಎಂಬಲ್ಲಿ ಭಾನುವಾರ ಸಂಜೆ ಬೆಳಕಿಗೆ ಬಂದಿದೆ.
ಶರೀಫ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಶರೀಫ್ ದುಬೈಯಲ್ಲಿ ಉದ್ಯೋಗದಲ್ಲಿದ್ದು, ಪತ್ನಿ ರುಕ್ಸಾನಾ ಹಾಗೂ ಇಬ್ಬರು ಮಕ್ಕಳು ಮನೆಗೆ ಬೀಗ ಹಾಕಿ ಎರಡು ದಿನಗಳ ಹಿಂದೆ ಸಂಬಂಧಿಕರ ಮನೆಗೆ ತೆರಳಿದ್ದರು. ರವಿವಾರ ಸಂಜೆ ಮರಳಿ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಮನೆಯ ಹಿಂಬಾಗಿಲ ಗ್ರಿಲ್ಸ್ ಮುರಿದು ಬಾಗಿಲಿನ ಬೀಗ ಮುರಿದು ಕಳ್ಳರು ಒಳನುಗ್ಗಿ ಕಪಾಟಿ ನಲ್ಲಿರಿಸಲಾಗಿದ್ದ ಚಿನ್ನಾಭರಣವನ್ನು ಕಳವು ಮಾಡಿದ್ದಾರೆ.
ಕಪಾಟಿನಲ್ಲಿದ್ದ ವಸ್ತ್ರ ಹಾಗೂ ಇತರ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೀಗ ಮುರಿಯಲೆತ್ನಿಸಿದ ಕಬ್ಬಿಣದ ರಾಡ್ ಮನೆಯೊಳಗೆ ಪತ್ತೆಯಾಗಿದೆ. ಕುಂಬಳೆ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ. ಮನೆಯವರ ಚಲನವಲನ ಅರಿತವರೇ ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.