 
ಬಡ ನಿವೇಶನ ರಹಿತರಿಗೆ ಎ+3 ಮಾದರಿ ವಸತಿ ಯೋಜನೆಯನ್ನು ಜಾರಿಗೊಳಿಸಲು ಒತ್ತಾಯಿಸಿ ಪ್ರತಿಭಟನೆ
ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಎಂ ರಾಜ್ಯ ಸಮಿತಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿರುವ ಸುಮಾರು 7,000ದಷ್ಟು ಮನೆ ನಿವೇಶನ ಆಕಾಂಕ್ಷಿಗಳ ಪರಿಸ್ಥಿತಿ ಡೋಲಾಯಮಾನವಾಗಿದೆ. ಕೇಂದ್ರ, ರಾಜ್ಯ ಸರಕಾರ ಮತ್ತು ಸ್ಥಳೀಯಾಡಳಿತವು ನಿವೇಶನ ರಹಿತರಿಗೆ ಸೂರು ನೀಡುವಲ್ಲಿ ವಿಫಲವಾಗಿದೆ. ಪಾಲಿಕೆ ವ್ಯಾಪ್ತಿಯ ಶಾಸಕರು ವಸತಿ ನೀಡುವ ಬದಲು ನಿವೇಶನ ರಹಿತರ ಹೆಸರಿನಲ್ಲಿ ಟಿಡಿಆರ್ ನೀಡಿ ಕೋಟ್ಯಾಂತರ ರೂ. ಅವ್ಯವಹಾರ ಎಸಗಿದ್ದಾರೆ ಎಂದು ಆರೋಪಿಸಿದರು.
ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸುರತ್ಕಲ್ ಇಡ್ಯಾದಲ್ಲಿ ಬಹುಮಹಡಿಗಳ ನಿವೇಶನ ರಹಿತರ ವಸತಿ ಸಂಕೀರ್ಣ ಕಾಮಗಾರಿ ಅರ್ಧದಲ್ಲೇ ನಿಂತು ಆರು ವರ್ಷಗಳು ಕಳೆದರೂ ಜನಪ್ರತಿನಿದಿಗಳಿಗೆ ಯಾವುದೇ ಸಂಬಂಧ ಇರದ ರೀತಿಯಲ್ಲಿ ಮೂಕರಾಗಿದ್ದಾರೆ. ಶಕ್ತಿನಗರದಲ್ಲಿಯೂ ವಸತಿ ನಿರ್ಮಾಣ ಯೋಜನೆ ಅಂತಿಮಗೊಂಡಿಲ್ಲ. ಮನಪಾ ಅಡಳಿತ ಮತ್ತು ಜನಪ್ರತಿನಿಧಿಗಳ ಉಡಾಫೆ ಮನೋಭಾವವೇ ಇದಕ್ಕೆ ಕಾರಣ. ಈ ಎರಡು ಯೋಜನೆಗಳು ಅಲ್ಲದೆ ಟಿಡಿಆರ್‌ನಲ್ಲಿ ವಸತಿರಹಿತರ ಹೆಸರಿನಲ್ಲಿ ನಾಲೈದು ಕಡೆ ಮಂಗಳೂರು ಮಹಾನಗರ ಪಾಲಿಕೆ ಜಾಗವನ್ನು ಪಡೆದಿದೆಯೇ ವಿನಃ ಕಾಮಗಾರಿಯ ಆರಂಭಿಸಿಲ್ಲ ಎಂದರು.
ಡಿವೈಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಯುವಜನ ಮುಖಂಡ ಶ್ರೀನಾಥ್ ಕಾಟಿಪಳ್ಳ ಮಾತನಾಡಿದರು.
ಪ್ರತಿಭಟನೆಯ ನೇತೃತ್ವವನ್ನು ಹೋರಾಟ ಸಮಿತಿಯ ಅಧ್ಯಕ್ಷೆ ಅಸುಂತಾ ಡಿಸೋಜ, ನವೀನ್ ಕೊಂಚಾಡಿ, ಅಬ್ದುಲ್ ತಯ್ಯೂಬ್, ನಾಗೇಶ್ ಕೋಟ್ಯಾನ್, ಮನೋಜ್ ವಾಮಂಜೂರ್, ಯೋಗಿತಾ ಉಳ್ಳಾಲ್ ವಹಿಸಿದ್ದರು.
ಡಿಎಚ್‌ಎಸ್ ಮುಖಂಡರಾದ ಕೃಷ್ಣ ತಣ್ಣೀರುಬಾವಿ, ರಾದಾಕೃಷ್ಣ, ತಿಮ್ಮಯ್ಯ ಕೊಂಚಾಡಿ, ಡಿವೈಎಫ್‌ಐ ಮುಖಂಡ ರಾದ ಜಗದೀಶ ಬಜಾಲ್, ನಾಸಿರ್ ಬೆಂಗ್ರೆ ಉಪಸ್ಥಿತರಿದ್ದರು. ಹೋರಾಟಸಮಿತಿಯ ಕಾರ್ಯದರ್ಶಿ ಪ್ರಮೀಳಾ ಶಕ್ತಿನಗರ ವಂದಿಸಿದರು.