ಕಾರ್ಮಿಕ ನಾಯಕರನ್ನು ಬಂಧಿಸಿದ ರಾಜ್ಯ ಸರಕಾರದ ನಡೆಗೆ ಸಿಐಟಿಯು ತೀವ್ರ ಖಂಡನೆ
ಮಂಗಳೂರು: ನ್ಯಾಯಯುತ ಬೇಡಿಕೆಗಳಿಗಾಗಿ ನಡೆಸಲುದ್ದೇಶಿಸಿದ ಹೋರಾಟದ ಕರಪತ್ರಗಳನ್ನು ಬೆಂಗಳೂರು ನಗರದಲ್ಲಿ ಹಂಚುತ್ತಿದ್ದ ಕಾರ್ಮಿಕ ನಾಯಕರನ್ನು ಬಂಧಿಸಿದ ರಾಜ್ಯ ಸರಕಾರದ ಕ್ರಮ ಸಂವಿಧಾನ ವಿರೋಧಿ ಮತ್ತು ಸರ್ವಾಧಿಕಾರಿ ನಡೆಯಾಗಿದ್ದು ಇದನ್ನು ಕೇಂದ್ರ ಕಾರ್ಮಿಕ ಸಂಘಟನೆಯಾದ ಸಿಐಟಿಯು ಬಲವಾಗಿ ಖಂಡಿಸುತ್ತದೆ ಎಂದು ಸಿಐಟಿಯು ದ.ಕ. ಜಿಲ್ಲಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ, ರೈತ ವಿರೋಧಿ. ಹಾಗೂ ಜನವಿರೋಧಿ ಧೋರಣೆಗಳ ವಿರುದ್ಧ ಡಿಸೆಂಬರ್ 21ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಹೋರಾಟ ನಡೆಸಲು ಸಿಪಿಐಎಂ ರಾಜ್ಯ ಸಮಿತಿ ನಿರ್ಧರಿಸಿದ್ದು, ಈಗಾಗಲೇ ವ್ಯಾಪಕ ಪ್ರಚಾರ ಕಾರ್ಯ ನಡೆಯುತ್ತಿದೆ.ಇದರ ಭಾಗವಾಗಿ ಮನೆ ಮನೆ ಬೇಟಿ ಮಾಡಿ ಪ್ರಚಾರ ನಡೆಸುತ್ತಾ ಕರಪತ್ರ ಹಂಚುತ್ತಿದ್ದ ಇಬ್ಬರು ಸಿಪಿಐಎಂ ನಾಯಕರನ್ನು ಹಾಗೂ KITUನ ಕಾರ್ಮಿಕ ನಾಯಕರನ್ನು ಬಂಧಿಸಿರುವುದು ಅತ್ಯಂತ ಹೇಯ ಹಾಗೂ ಅಪ್ರಜಾಸತ್ತಾತ್ಮಕ ನಡೆಯಾಗಿದೆ ಎಂದು CITU ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಬೆಂಗಳೂರಿನ ಧೈತ್ಯ ಐಟಿ ಕಂಪೆನಿಗಳಾದ ಟಿಸಿಎಸ್, ಇನ್ಫೋಸಿಸ್, ವಿಪ್ರೋ ಮೊದಲಾದ ಕಂಪೆನಿಗಳ ಏಕಪಕ್ಷೀಯ ತೀರ್ಮಾನದಿಂದ ಕೆಲಸದಿಂದ ವಜಾ, ಮುಂತಾದ ಹಲವಾರು ಕಾರ್ಮಿಕ ವಿರೋಧಿ, ಕಾನೂನು ಬಾಹಿರ ಕ್ರಮಗಳನ್ನು ಕಾರ್ಮಿಕ ನ್ಯಾಯಾಲಯದಲ್ಲಿ ಸಿಐಟಿಯುಗೆ ಸೇರಿದ ಕರ್ನಾಟಕ ಐಟಿ ಯೂನಿಯನ್(KITU) ನಾಯಕರು ಪ್ರಶ್ನಿಸಿದ್ದರು ಮತ್ತು ಇವುಗಳ ವಿರುದ್ದ ನಿರಂತರ ಹೋರಾಟಗಳನ್ನು ನಡೆಸುತ್ತಿದ್ದರು. ಈ ಹೋರಾಟವನ್ನು ಹತ್ತಿಕ್ಕಲು ಮುಂದಾದ ರಾಜ್ಯ ಸರಕಾರ ಮಾಲಕರ ಜೊತೆ ಸೇರಿ ಈ ನಾಯಕರನ್ನು ಬಂಧಿಸಿರುವುದು ಕಾರ್ಮಿಕ ವಿರೋಧಿ ನೀತಿಯ ದ್ಯೋತಕವಾಗಿದೆ.ಹಾಗೂ ಜನರ ಬದುಕಿನ ಹಕ್ಕನ್ನೇ ನಿರಾಕರಿಸಲು ಮುಂದಾಗುವ ಹುನ್ನಾರದ ಭಾಗವಾಗಿದೆ.ಬಂಧಿಸಲ್ಪಟ್ಟವರಲ್ಲಿ ನಮ್ಮ ಜಿಲ್ಲೆಯ ಬೆಳ್ತಂಗಡಿಯ ಸುಹಾಸ ಅಡಿಗ ಅವರೂ ಸೇರಿದ್ದಾರೆ. ನಿರಂತರ ಬೆಲೆ ಏರಿಕೆ, ಕನಿಷ್ಟಕೂಲಿ ನೀಡದಿರುವುದು ಸೇರಿದಂತೆ ಕಾರ್ಮಿಕರ ಬದುಕನ್ನೇ ನಾಶ ಮಾಡುವ ರಾಜ್ಯ ಸರಕಾರದ ಆಡಳಿತ ವೈಖರಿಯನ್ನು ಸಿಐಟಿಯು ಎಂದಿಗೂ ಸಹಿಸುವುದಿಲ್ಲ ಎಂದು ರಾಜ್ಯ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದೆ.
ಮಾಲೀಕರ ಪರ ತಮ್ಮ ನಿಷ್ಟೆಯನ್ನು ಸಾಬೀತು ಪಡಿಸಲು ಮುಂದಾದ ರಾಜ್ಯದ ಕಾಂಗ್ರೇಸ್ ಸರಕಾರ ಕಾರ್ಮಿಕ ನಾಯಕರನ್ನು ವಿನಾಃ ಕಾರಣ ಬಂಧಿಸಿ ಲಾಕಪ್ ನಲ್ಲಿ ಇಟ್ಟಿರುವುದು ಸರಕಾರದ ಸರ್ವಾಧಿಕಾರಿ ನಡೆಗೆ ಸಾಕ್ಷಿಯಾಗಿದೆ. ತಕ್ಷಣ ಬಂದಿಸಲ್ಪಟ್ಟವರನ್ನು ಬೇಷರತ್ ಆಗಿ ಬಿಡುಗಡೆಗೊಳಿಸಬೇಕು ಹಾಗೂ ಅಕ್ರಮ ಬಂಧನ ನಡೆಸಿದ ಪೋಲೀಸರನ್ನು ತಕ್ಷಣ ಅಮಾನತುಗೊಳಿಸಿ ತನಿಖೆ ನಡೆಸಬೇಕೆಂದು CITU ದ.ಕ. ಜಿಲ್ಲಾಧ್ಯಕ್ಷರಾದ ಬಿ.ಎಂ. ಭಟ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.