ಬಿ.ಸಿ.ರೋಡು ವೃತ್ತದಲ್ಲಿ ಅನಧಿಕೃತ ಬೀದಿಬದಿ ವ್ಯಾಪಾರಿಗಳು ಸ್ವಯಂಪ್ರೇರಿತ ಸ್ಥಾನಪಲ್ಲಟ
ವೃತ್ತ ಬಳಿರುವ ಎಲ್ಲಾ ಅನಧಿಕೃತ ಗೂಂಗಡಿಗಳು ಪ್ರಸ್ತುತ ಇದ್ದ ಜಾಗದಿಂದ ಕೊಂಚ ಹಿಂಬದಿಗೆ ಸರಿದಿದೆ. ಈ ಅನಧಿಕೃತ ಬೀದಿಬದಿ ವ್ಯಾಪಾರಿಗಳಿಂದ ಸಾರ್ವಜನಿಕರಿಗಾಗುವ ತೊಂದರೆ ಮತ್ತು ಹೆದ್ದಾರಿ ಅಗಲೀಕರಣದ ಹಿನ್ನಲೆಯಲ್ಲಿ ಬಂಟ್ವಾಳ ಪುರಸಭೆಯ ಕೌನ್ಸಿಲ್ ಸಭೆ ಈ ಗೂಡಂಗಡಿಗಳ ತೆರವಿಗೆ ಸರ್ವಾನುಮತದ ನಿರ್ಣಯ ಕೈಗೊಂಡಿತ್ತು.
ಕಳೆದ ತಿಂಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿತ್ತಾದರೂ,ಅಧಿಕಾರಿಗಳು ಇದನ್ನು ಪಾಲಿಸದಿರುವುದರಿಂದ ಸಭೆಯಲ್ಲಿ ಸದಸ್ಯರು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.ಪುರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಕೊನೆಗೊಳ್ಳುತ್ತಿದ್ದಂತೆ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ವಸ್ತುಶಃ ಅ(ನ)ಧಿಕೃತ ಎಂಬಂತೆ ಗಟ್ಟಿ ನೆಲೆಯೂರಿದ್ದ ಬೀದಿ ಬದಿ ವ್ಯಾಪಾರಸ್ಥರು ಒಂದಾದಾಗಿಯೇ ಇದ್ದ ಜಾಗದಿಂದ ಕೊಂಚ ಹಿಂಬದಿಗೆ ಸರಿದಿದ್ದಾರೆ.
ಪುರಸಭೆಯ ಅಧಿಕಾರಿಗಳ ಸೂಚನೆಯ ಮೇರೆಗೆ ಈ ಬೀದಿಬದಿ ವ್ಯಾಪಾರಿಗಳು ಹಿಂಭಾಗಕ್ಕೆ ಸ್ಥಾನಪಲ್ಲಟಗೊಳ್ಳುತ್ತಿದ್ದಾರೆಂದು ಹೇಳಲಾಗಿದೆ.ಇದೀಗ ಗೂಡಂಗಡಿದಾರರು ಸ್ಥಾನಪಲ್ಲಟಗೊಳ್ಳುವ ಜಾಗ ರೈಲ್ವೇ ಇಲಾಖೆಗೊಳಪಟ್ಟಿದೆಯೆಂದು ಹೇಳಲಾಗಿದೆ.
ಪುರಸಭೆ ಕೇವಲ ನಾರಾಯಣ ಗುರುವೃತ್ತದ ಬಳಿರುವ ಅನಧಿಕೃತ ಗೂಡಂಗಡಿ ಮಾತ್ರವಲ್ಲ ಪುರಸಭಾ ವ್ಯಾಪ್ತಿಯಲ್ಲೆಡೆಯಲ್ಲು ಇರುವ ಅನಧಿಕೃತ ಬೀದಿಬದಿ ವ್ಯಾಪಾರಿಗಳನ್ನು ಮತ್ತು ಅಧಿಕೃತ ಅಂಗಡಿಗಳ ಮುಂಭಾಗ ರಸ್ತೆ, ಪುಟ್‌ಪಾತನ್ನು ಅತಿಕ್ರಮಿಸಿರುವ ಸಾಮಾಗ್ರಿಗಳ ತೆರವು ಕಾರ್ಯಾಚರಣೆಗೂ ನಿರ್ಣಯ ಕೈಗೊಂಡಿತ್ತು. ಆದರೆ ಇದ್ಯಾವುದು ಕೂಡ ಕಾರ್ಯಗತಕ್ಕೆ ಮಾತ್ರ ಬಂದಿಲ್ಲ..
ಆದರೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮತ್ತು ಸರ್ಕಲ್‌ನ ಅಭಿವೃದ್ಧಿ ವೇಳೆ ಇದೇ ಬೀದಿ ಬದಿಯ ಅಂಗಡಿಗಳು ಕಾಮಗಾರಿಗೆ ತೊಡಕಾಗಿ ಪರಿಣಮಿಸಿದೆ ಎಂದು ಸಾಕಷ್ಟು ವಿರೋಧಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು. ಅಲ್ಲದೆ ಬೀದಿ ಬದಿ ವ್ಯಾಪಾರಿಗಳಿಂದ ಇತರ ಅಂಗಡಿ ಮಾಲಕರಿಗೆ ನಷ್ಟವುಂಟಾಗುತ್ತಿದೆ ಎಂಬ ದೂರುಗಳು ಕೂಡ ಕೇಳಿಬಂದಿತ್ತು.
ಈ ಬಗ್ಗೆ ಪುರಸಭೆಯ ಹಿರಿಯ ಬಿಜೆಪಿ ಸದಸ್ಯರುಗಳು ಅನೇಕ ಬಾರಿ ಸಾಮಾನ್ಯ ಸಭೆಯಲ್ಲಿ ಚರ್ಚೆಯನ್ನು ಮಾಡಿದ್ದಲ್ಲದೆ, ಕೊನೆಯ ಎರಡು ಸಭೆಯಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡದಿರುವುದರ ಬಗ್ಗೆ ಗರಂ ಆಗಿದ್ದರು.
ಹಾಗಾಗಿ ಮತ್ತೆ ಅಧಿಕಾರಿಗಳು ಖಡಕ್ ವಾರ್ನಿಂಗ್ ನೀಡಿ ಇಲ್ಲಿನ ಅಂಗಡಿಗಳನ್ನು ತೆರವು ಮಾಡದಿದ್ದರೆ ಪುರಸಭೆಯ ವತಿಯಿಂದ ತೆರವು ಮಾಡುವ ಎಚ್ಚರಿಕೆ ನೀಡಿತ್ತು.
ಪುರಸಭೆಯ ನೋಟೀಸ್‌ಗೆ ಮನ್ನಣೆ ನೀಡಿ ವ್ಯಾಪಾರಿಗಳು ಇಂದು ಬೆಳಿಗ್ಗೆಯಿಂದಲೇ ಅಂಗಡಿಗಳನ್ನು ತೆರವು ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಆದರೆ ಹಸಿ ಮೀನಿನ ವ್ಯಾಪಾರಿ ಮಾತ್ರ ಇನ್ನೂ ಕೂಡ ಅಲ್ಲಿಂದ ತೆರಳದೆ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿವೆ.
ಇದರ ಜೊತೆಗೆ ಸರ್ಕಲ್ ನಿಂದ ಮುಂದೆ ಬೆಂಗಳೂರು ಹೆದ್ದಾರಿಯ ಸನಿಹ ಇರುವ ಮಸೀದಿ ಮುಂಭಾಗದಲ್ಲಿ ರಸ್ತೆಯಲ್ಲಿಯೇ ಹಣ್ಣು ಹಂಪಲು, ಹಲಸಿನ ಹಣ್ಣು ಮತ್ತು ಜ್ಯೂಸ್ ಮಾರುವುದು ಕೂಡ ಅಪಾಯಕಾರಿ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ. ಗ್ರಾಹಕರು ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಿ ಹಣ್ಣು ಹಂಪಲು ತೆಗೆದುಕೊಳ್ಳಲು ಬರುವುದು ಕಂಡು ಬಂದಿದ್ದು, ಅಪಘಾತಗಳಿಗೆ ಕಾರಣವಾಗಬಹುದು ಎಂದು ಹೇಳಲಾಗಿದೆ. ಈ ಹಿಂದೆ ಇದೇ ಜಾಗದಲ್ಲಿ ಹಣ್ಣು ತೆಗೆದುಕೊಂಡು ಹೋಗಲು ವಾಹನ ನಿಲ್ಲಿಸಿ ಬರುವ ವೇಳೆ ಅಪಘಾತ ಸಂಭವಿಸಿ ಸಾವುನೋವು ಉಂಟಾದ ಘಟನೆಗಳು ನಡೆದಿವೆ.
ಹಾಗಾಗಿ ಈ ಬೀದಿಬದಿ ವ್ಯಾಪಾರಿಗಳ ತೆರವು ಯಾವಾಗ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.