ಕೂಳೂರು ಸೇತುವೆ ಕಾಮಗಾರಿ ವಿಳಂಬ: ಮತ್ತೊಂದು ಡೆಡ್‌ಲೈನ್
ವಿಳಂಬದ ಬಗ್ಗೆ ಅಧಿಕಾರಿಗಳನ್ನು ಸಂಸದರು ಪ್ರಶ್ನಿಸಿದಾಗ, ಕಾಮಗಾರಿ ಆರಂಭಗೊಂಡಿರುವುದಾಗಿ ಅಧಿಕಾರಿಗಳು ಉತ್ತರಿಸಿದರು. ಅಡಿಪಾಯದ ಪ್ರಾಥಮಿಕ ಕೆಲಸಗಳು ಪೂರ್ಣಗೊಂಡಿವೆ. ಪೈಲ್ ಕ್ಯಾಪ್ ಕಾಮಗಾರಿ ಪ್ರಗತಿಯಲ್ಲಿದ್ದು, ಜನವರಿಯೊಳಗೆ ಕಾಮಗಾರಿ ಮುಗಿದು ಸರ್ವಿಸ್ ರಸ್ತೆ ಕಾಮಗಾರಿಯ ಬಳಿಕ ಮಾರ್ಚ್‌ನಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಕಾಮಗಾರಿಗೆ ಹಣದ ಕೊರತೆ ಇಲ್ಲ ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಜಾವೇದ್ ಅಜ್ಮಿ ಸಭೆಯಲ್ಲಿ ಮಾಹಿತಿ ನೀಡಿದರು.
ಮೂರು ಪಾಳಿಯಲ್ಲಿ ಕಾಮಗಾರಿ ನಡೆದರೆ ಮಾತ್ರವೇ ಮಾರ್ಚ್‌ನಲ್ಲಿ ಮುಗಿಸಲು ಸಾಧ್ಯ. ಈ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ದರ್ಶನ್ ಸೂಚಿಸಿದರು.
ಪೆರಿಯ ಶಾಂತಿಯಿಂದ ಬಿ.ಸಿ.ರೋಡ್‌ವರೆಗಿನ 48.485 ಕಿ.ಮೀ. ಹೆದ್ದಾರಿಯಲ್ಲಿ 43.1 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿ 2026ರ ಮಾರ್ಚ್ಗೆ ಪೂರ್ಣಗೊಳ್ಳಲಿದೆ. ನೀರಕಟ್ಟೆಯಲ್ಲಿ ಬಂಡೆಯನ್ನು ಒಡೆಯುವ ಕೆಲಸ ಆಗಬೇಕಾಗಿದೆ. ಈ ಬಗ್ಗೆ ಸ್ಥಳೀಯರಿಂದ ಆಕ್ಷೇಪವಿದೆ ಎಂದು ಅಧಿಕಾರಿಗಳು ತಿಳಿಸಿದಾಗ, ಬಂಡೆ ತೆರವು ತ್ವರಿತವಾಗಿ ಪೂರ್ಣಗೊಳಿಸಲು ಪುತ್ತೂರು ಎಸಿ ಮಧ್ಯ ಪ್ರವೇಶಿಸುವಂತೆ ಸಂಸದರು ಸಲಹೆ ನೀಡಿದರು.
ಡಿಸೆಂಬರ್‌ಗೆ ಪೂರ್ಣ..
ಮಹಕಾಳಿಪಡ್ಪು ರೈಲ್ವೇ ಕೆಳಸೇತುವೆ ಕಾಮಗಾರಿ ವಿಳಂಬಗೊಂಡಿರುವ ಬಗ್ಗೆ ಶಾಸಕರಾದ ವೇದವ್ಯಾಸ ಕಾಮತ್ ಪ್ರಶ್ನಿಸಿದಾಗ, ಕಾಮಗಾರಿ ಡಿ.20ರೊಳಗೆ ಪೂರ್ಣಗೊಳ್ಳಲಿದೆ ಎಂದು ಸ್ಮಾರ್ಟ್ ಸಿಟಿ ಅಧಿಕಾರಿ ಅರುಣ್ ಪ್ರಭ ಉತ್ತರಿಸಿದರು.
ಈ ರೈಲ್ವೇ ಕೆಳಸೇತುವೆ ಕಾಮಗಾರಿ ಪೂರ್ಣಗೊಳ್ಳದ ಕಾರಣ 2022ರಲ್ಲಿ ಕರಾವಳಿ ವೃತ್ತ- ಮಹಾವೀರ ವೃತ್ತದ (ಪಂಪ್ವೆಲ್)ವರೆಗಿನ ರಸ್ತೆ ಕಾಮಗಾರಿ ಅನುಷ್ಟಾನ ಸಾಧ್ಯವಾಗುತ್ತಿಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ಷೇಪಿಸಿದರು.
ರೈಲ್ವೇ ಇಲಾಖೆಯ ಡಿಆರ್‌ಎಂ ದರ್ಜೆಯ ಅಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಸಮನ್ವಯ ಸಭೆ ನಡೆಸಲು ರೈಲ್ವೇ ಸಚಿವರೇ ಸೂಚಿಸಿದ್ದರೂ ಸಭೆ ನಡೆಯುತ್ತಿಲ್ಲ. ಈ ಬಗ್ಗೆ ಸಚಿವಾಲಯಕ್ಕೆ ದೂರು ನೀಡಬೇಕಾಗುತ್ತದೆ ಎಂದು ಸಂಸದರು ಎಚ್ಚರಿಸಿದರು.
ಪಾದಾಚಾರಿ ಸೇತುವೆ ಪ್ರಸ್ತಾವನೆ..
ದ.ಕ. ಜಿಲ್ಲೆಯ ಮುಲ್ಕಿಯಲ್ಲಿ 500 ಮೀಟರ್, ಪಡುಪಣಂಬೂರು ಬಳಿ 310 ಮೀಟರ್, ಹಳೆಯಂಗಡಿಯಲ್ಲಿ 550 ಮೀಟರ್ ಹಾಗೂ ಬೀರಿಯಲ್ಲಿ 700 ಮೀಟರ್ ಉದ್ದದ ಸರ್ವಿಸ್ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪ್ರಸ್ತಾವಿಸಲಾಗಿದೆ. ಇದೇ ವೇಳೆ ಮುಲ್ಕಿ ಬಪ್ಪನಾಡು ದೇವಸ್ಥಾನದ ಬಳಿ, ಮುಕ್ಕ ಶ್ರೀನಿವಾಸ ಕಾಲೇಜು ಬಳಿ ಹಾಗೂ ಗೋರಿಗುಡ್ಡಗಳಲ್ಲಿ ಪಾದಾಚಾರಿ ಸೇತುವೆಗಳನ್ನು ನಿರ್ಮಿಸಲು ಪ್ರಸ್ತಾವಿಸಲಾಗಿದೆ ಎಂದು ಸಂಸದರು ತಿಳಿಸಿದರು.
ಸುರತ್ಕಲ್-ಮಂಗಳೂರು-ಬಿಸಿರೋಡ್ ರಾಷ್ಟ್ರೀಯ ಹೆದ್ದಾರಿಯು ಪ್ರಸ್ತುತ ನವಮಂಗಳೂರು ಬಂದರು ರಸ್ತೆ ಕಂಪನಿ ಅಧೀನದಲ್ಲಿದೆ. ಇದರ ನಿರ್ವಹಣೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅನುದಾನ ಒದಗಿಸುತ್ತಿಲ್ಲ. ಈ ಹೆದ್ದಾರಿ ಶೀಘ್ರವೇ ಎನ್‌ಎಚ್‌ಎಐಗೆ ಹಸ್ತಾಂತರವಾಗಲಿದೆ. ಚತುಷ್ಪಥವಾಗಿ ಈ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಲು ಇದರಲ್ಲಿರುವ ಬ್ಲಾಕ್ಸ್ಪಾಟ್ ಸರಿಪಡಿಸಲು ಡಿಪಿಆರ್ ತಯಾರಿಸುವ ಏಜೆನ್ಸಿ ಗೊತ್ತುಪಡಿಸಲು ಟೆಂಡರ್ ಕರೆಯಲಾಗಿದೆ. ಇದರ ಅಭಿವೃದ್ಧಿಗೆ ಎಲ್ಲ ಪಾಲುದಾದರರ ಜತೆ ಚರ್ಚಿಸಿ ಯೋಜನೆ ರೂಪಿಸಲಾಗುತ್ತದೆ ಎಂದರು.
ಜಿ.ಪಂ. ಸಿಇಒ ವಿನಾಯಕ ನರ್ವಾಡೆ ಕರ್ಬಾರಿ, ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಆಯಂಟನಿ ಮರಿಯಪ್ಪ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.