ಇನ್ನೂ ಬಾರದ ಬೆಳೆ ವಿಮೆ ಕಂತಿನ ಮೊತ್ತ
ಮಂಗಳೂರು: ಕಳೆದ ವರ್ಷ ಪಾವತಿಸಿದ ಬೆಳೆ ವಿಮೆ ಕಂತಿನ ಮೊತ್ತ ಇನ್ನೂ ಕೃಷಿಕರ ಖಾತೆಗೆ ಜಮೆಯಾಗಿಲ್ಲ. ಅಡಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ವಿಮೆ ಮಾಡಿಸಿದ್ದ ರೈತರು, ಫಸಲು ನಷ್ಟದ ಹಿನ್ನೆಲೆಯಲ್ಲಿ ಮೊತ್ತ ಬೇಗನೆ ಜಮೆಯಾಗುವ ನಿರೀಕ್ಷೆಯಲ್ಲಿದ್ದರು. ಈ ಬಗ್ಗೆ ಸಹಕಾರಿ ಸಂಘ ಹಾಗೂ ತೋಟಗಾರಿಕೆ ಇಲಾಖೆಗಳಲ್ಲೂ ಮಾಹಿತಿ ಲಭ್ಯವಾಗುತ್ತಿಲ್ಲ. 2018-19ರಲ್ಲಿ ಗರಿಷ್ಠ ಮಿತಿ 1.28 ಲಕ್ಷ ರೂ., 2019-20ರಲ್ಲಿ 60 ಸಾವಿರ ರೂ., 2020-21ರಲ್ಲಿ 52 ಸಾವಿರ ರೂ., 2021-22ರಲ್ಲಿ 60 ಸಾವಿರ ರೂ. 2023-24ರಲ್ಲಿ 70 ಸಾವಿರ ರೂ. ಆಸುಪಾಸು ಮೊತ್ತ ಪ್ರತಿ ಹೆಕ್ಟೇರ್ ಅಡಕೆ ಬೆಳೆಗೆ ಜಮೆಗೊಂಡಿತ್ತು.
ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಸಂಘಗಳ ಮೂಲಕ ಕೃಷಿಕರು ವಿಮೆ ಕಂತನ್ನು ಪಾವತಿಸಬಹುದು. ರಾಷ್ಟ್ರೀಕೃತ ಬ್ಯಾಂಕ್‌ಗಲೂ ಈ ಯೋಜನೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ. ಇದರಿಂದ ಕೃಷಿಕರು ಸಹಕಾರ ಸಂಘಗಳ ಮೂಲಕವೇ ಕಂತನ್ನು ಪಾವತಿಸುತ್ತಾರೆ. ಸಹಕಾರ ಸಂಘಗಳು ತನ್ನ ಸದಸ್ಯರ ಅನುಕೂಲಕ್ಕಾಗಿ ಈ ಯೋಜನೆಯನ್ನು ಕೃಷಿಕರಿಗೆ ತಲುಪಿಸುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತವೆ. ಇದಕ್ಕಾಗಿ ಸಹಕಾರಿ ಸಂಘಗಳ ಸಿಬ್ಬಂದಿ ಕಂತಿನ ಮೊತ್ತ, ಅಗತ್ಯ ದಾಖಲೆಗಳನ್ನು ಸಂಗ್ರಹಿಸುವ ಹೆಚ್ಚುವರಿ ಕೆಲಸ ಮಾಡುತ್ತಾರೆ.
ಪ್ರದೇಶದಲ್ಲಿ ಬಿದ್ದ ಮಳೆಯ ಪ್ರಮಾಣದ ಆಧಾರದಲ್ಲಿ ನೀಡುವ ಬೆಳೆ ವಿಮೆಗೆ ಬೇಕಾಗುವ ಇತರ ದಾಖಲೆಗಳನ್ನು ತೋಟಗಾರಿಕೆ ಇಲಾಖೆ ಒದಗಿಸುತ್ತದೆ. ಆದರೆ ಬೆಳೆ ವಿಮೆ ಮೊತ್ತ ಜಮೆಯಾಗುವ ಯಾವುದೇ ಮಾಹಿತಿ ಎರಡು ಇಲಾಖೆಗಳಿಗೂ ಸಿಗುವುದಿಲ್ಲ. ಮೊತ್ತ ನೇರವಾಗಿ ರಾಷ್ಟ್ರೀಕೃತ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಇದೀಗ ಬೆಳೆ ವಿಮೆ ಮೊತ್ತ ಕಟ್ಟಿರುವ ಕೃಷಿಕರು ಸಹಕಾರಿ ಸಂಘ ಹಾಗೂ ತೋಟಗಾರಿಕೆ ಇಲಾಖೆಗಳಲ್ಲಿ ಪ್ರಶ್ನಿಸುತ್ತಿದ್ದಾರೆ. ಆದರೆ ಅವರಿಗೆ ಈ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಇದರಿಂದ ಯಾರನ್ನು ಪ್ರಶ್ನಿಸಬೇಕು ಎಂಬ ಗೊಂದಲ ಕೃಷಿಕರನ್ನು ಕಾಡುತ್ತಿದೆ.