ಎತ್ತಿನಹೊಳೆ ನೀರು ಕೈಗಾರಿಕೆಗೆ ಜಿಲ್ಲೆಯ ಬದುಕು ‘ಅಸ್ಥಿರ’ ಯೋಜನೆಗೆ ವಿರೋಧ: ಶಾಸಕ ಅಶೋಕ್ ರೈ
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪಶ್ಚಿಮವಾಹಿನಿ ಯೋಜನೆಗೆ ಬೇಕಾದಷ್ಟು ಅನುದಾನ ನೀಡುವ ಮೂಲಕ ಜಿಲ್ಲೆಯಲ್ಲಿ ನೀರುಸಂಗ್ರಹಣಾ ಶಕ್ತಿಯನ್ನು ಉದ್ದೀಪನಗೊಳಿಸಿ ಬಳಿಕ ಹೆಚ್ಚುವರಿ ನೀರನ್ನು ಕೈಗಾರಿಕೆಗಳಿಗೆ ಸರಬರಾಜು ಮಾಡುವುದಕ್ಕೆ ನಮ್ಮ ಸಮ್ಮತಿ ಇದೆ. ಆದರೆ ಮೊದಲು ಜಿಲ್ಲೆಯಲ್ಲಿ ಅಣೆಕಟ್ಟುಗಳು, ಕಿಂಡಿಅಣೆಕಟ್ಟು ಗಳ ನಿರ್ಮಾಣವಾಗಬೇಕು. ಉಪ್ಪಿನಂಗಡಿಯ ನೇತ್ರಾವತಿ ಹಾಗೂ ಕಠಾರದಲ್ಲಿ ಎರಡು ಬೃಹತ್ ಅಣೆಕಟ್ಟುಗಳಿಗೆ ಬೇಡಿಕೆ ನೀಡಲಾಗಿದೆ. ಇಲ್ಲಿನ ನೀರಿನ ಸಂಗ್ರಹವಾಗಬೇಕು. ಆ ಬಳಿಕವಷ್ಟೇ ಮುಂದಿನ ಯೋಜನೆಗೆ ಮುಂದಾಗಬೇಕು. ಅಲ್ಲಿ ತನಕ ಎತ್ತಿನಹೊಳೆ ನೀರನ್ನು ಕೈಗಾರಿಕೆಗಳಿಗೆ ಬಳಕೆ ಮಾಡಬಾರದು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.
ಈ ವಿಚಾರದ ಕುರಿತು ರಾಜ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಬಂಧಪಟ್ಟ ಇಲಾಖೆಯ ಸಚಿವರನ್ನು ಭೇಟಿ ಮಾಡಿ ಸರ್ಕಾರದ ಈ ಚಿಂತನೆಯನ್ನು ಕೈಬಿಡುವಂತೆ ಆಗ್ರಹಿಸುವುದಾಗಿ ಅವರು ತಿಳಿಸಿದರು.
ಬಿಜೆಪಿ ಪ್ರತಿಭಟನೆಯ ನಾಟಕ:
ಎತ್ತಿನಹೊಳೆ ಯೋಜನೆಯ ಆರಂಭದಲ್ಲಿ ದ.ಕ. ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ಡಿ.ವಿ. ಸದಾನಂದ ಗೌಡ ಅವರ ಮುಖ್ಯಮಂತ್ರಿಯಾಗಿದ್ದರು. ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದವರೂ ಬಿಜೆಪಿಗರೇ. ಕೊನೆಗೆ ಈ ಯೋಜನೆಗೆ 13 ಕೋಟಿ ಅನುದಾನ ಕೊಟ್ಟದ್ದೂ ಬಿಜೆಪಿ ಸರ್ಕಾರ. ಜನರನ್ನು ಮರಳು ಮಾಡುವುದಕ್ಕಾಗಿ ಬಿಜೆಪಿ ನಡೆಸಿದ ನಾಟಕವೇ ಪ್ರತಿಭಟನೆ ಎಂದವರು ಹೇಳಿದರು.
ಆಮದಿಗೆ ಕಡಿವಾಣ:
ರಬ್ಬರ್ ಸೇರಿದಂತೆ ಸುಮಾರು 28 ಬಗೆಯ ವಾಣಿಜ್ಯ ಬೆಳೆಗಳನ್ನು ಕೃಷಿಬೆಳೆಯಾಗಿ ನಮೂದಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಮನವಿ ಮಾಡಿದೆ. ಆದರೆ ಈ ತನಕ ಕೇಂದ್ರ ಸರ್ಕಾರ ಅದನ್ನು ಪರಿಗಣಿಸಿಲ್ಲ. ರಬ್ಬರ್ ಬೆಳೆಯನ್ನು ಕೃಷಿ ಬೆಳೆಯಾಗಿ ಪರಿವರ್ತಿಸಿದಲ್ಲಿ ಮಾತ್ರ ಅವರಿಗೆ ಸರ್ಕಾರದಿಂದ ಪರಿಹಾರ ಕೊಡಲು ಸಾಧ್ಯವಿದೆ. ಹೊರದೇಶಗಳಲ್ಲಿ ಕಾಡುತ್ಪತ್ತಿಯಾಗಿರುವ ರಬ್ಬರ್ ಸಾಕಷ್ಟು ಪ್ರಮಾಣದಲ್ಲಿ ನಮ್ಮ ದೇಶಕ್ಕೆ ಆಮದಾಗುತ್ತಿದೆ. ಮೊದಲು ಈ ಆಮದಿಗೆ ಕಡಿವಾಣ ಹಾಕಿದಲ್ಲಿ ರಬ್ಬರ್ ಬೆಳೆಗಾರರಿಗೆ ನಿರೀಕ್ಷಿತ ಧಾರಣೆ ಸಿಗಬಹುದು ಎಂದ ಅವರು ಅಡಿಕೆ ಬೆಳೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಹೇರಿರುವ ನಿಷೇಧವನ್ನು ತಪ್ಪಿಸಲು ಅವರಿಗೆ ಸರಿಯಾದ ಮಾಹಿತಿ ನೀಡಬೇಕಾಗಿದೆ. ಆ ಕೆಲಸವನ್ನು ಕ್ಯಾಂಪ್ಕೊ ಸಂಸ್ಥೆ ಮಾಡಬೇಕು ಎಂದರು.
ಪ್ರಸ್ತುತ ಮಳೆ ಕಡಿಮೆಯಾಗಿದೆ. ರಸ್ತೆಗಳ ದುರಸ್ಥಿ ಕಾಮಾಗಾರಿ ಮುಂದಿನ 3 ದಿನಗಳೊಳಗಾಗಿ ಆರಂಭವಾಗಲಿದೆ. ಈಗಾಗಲೇ ಈ ಬಗ್ಗೆ ಕಾರ್ಯಾದೇಶ ನೀಡಲಾಗಿದೆ. ಬೆಳೆವಿಮೆ ಮುಂದಿನ 15 ದಿನಗಳೊಳಗೆ ಎಲ್ಲಾ ರೈತ ಕೈಗೆ ದೊರೆಯಬಹುದು. ಯಾಕೆಂದರೆ ಈ ಬಗ್ಗೆ ಸರ್ಕಾರ ಹಾಗೂ ವಿಮಾ ಸಂಸ್ಥೆಯ ನಡುವೆ ಮಾತುಕತೆ ನಡೆಯುತ್ತಿದೆ. ಪುತ್ತೂರು ಮಹಾಲಿಂಗೇಶ್ವರ ದೇವಳದ ಅಭಿವೃದ್ದಿ ಬಗ್ಗೆ ಹೊಸ ಮಾಸ್ಟರ್ ಫ್ಲ್ಯಾನ್ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಡಿ.15ರೊಳಗಾಗಿ ಆಡಳಿತಾತ್ಮಕ ಮಂಜೂರಾತಿ ದೊರೆತು ಕಾಮಗಾರಿ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.