ಡಿ.16 ರಂದು ವಿಜಯ್ ದಿವಸ್ ಕಾರ್ಯಕ್ರಮ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ಡಿ.16ರಂದು ಕದ್ರಿ ಯುದ್ಧ ಸ್ಮಾರಕದಲ್ಲಿ ವಿಜಯ್ ದಿವಸ್ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗಿ 9ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ. ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ಯೋಧರಿಗೆ ಪುಷ್ಪಗುಚ್ಛಗಳನ್ನು ಸಲ್ಲಿಸುವ ಮೂಲಕ ನಮನ ಸಲ್ಲಿಸಲಾಗುವುದು ಎಂದರು.
1971 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಯುದ್ಧದಲ್ಲಿ ಭಾರತದ ವಿಜಯ ಸಾಧಿಸಿದ ದಿನವನ್ನು ದೇಶವಾಸಿಗಳು ಎಂದೂ ಮರೆಯುವಂತಿಲ್ಲ. ಸ್ಮರಣೆಯನ್ನು ಸದಾ ಮಾಡುತ್ತಿರಬೇಕೆಂಬ ನೆಲೆಯಲ್ಲಿ ಪ್ರತಿವಷ ಡಿ.೧೬ರಂದು ವಿಜಯ ದಿವಸ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿ.ಪಂ. ಸಿಇಒ ನರ್ವಾಡೆ ವಿನಾಯಕ ಕರ್ಬಾರಿ, ಪಾಲಿಕೆ ಆಯುಕ್ತ ರವಿಚಂದ್ರ ನಾಕ್, ಡಿಐಜಿ ಅಮಿತ್ ಸಿಂಗ್, ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಪ್ರಮುಖರಾದ ವಿರಾಜ್ ಕಾಮತ್, ಅರುಣ್ ಕೆ., ನಿಟ್ಟೆ ವಿಶಾಲ್ ಹೆಗ್ಡೆ, ರಾಮಕೃಷ್ಣ, ಕುಡ್ಪಿ ಅರವಿಂದ ಶೆಣೈ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಮಂದಿ ನೌಕಾಪಡೆ, ವಾಯುಪಡೆಗೆ ನೇಮಕಾತಿ ಆಗುತ್ತಿದ್ದಾರೆ. ಜಿಲ್ಲೆಯ ಯುವಜನರು ಸೇನೆಗೆ ಸೇರಬೇಕು ಎಂಬ ನಿಟ್ಟಿನಲ್ಲಿ ನಮ್ಮ ಸಂಘದಿಂದ ಜಾಗೃತಿ ಮೂಡಿಸುವ ಕೆಲಸ ನಡೆಸುತ್ತಿದ್ದೇವೆ. ಪ್ರಸ್ತುತ ಕರಾವಳಿಯ 6000 ಮಂದಿ ಯುವ ಸೈನಿಕರು ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂದು ಅವರು ಹೇಳಿದರು.
ಕರ್ನಲ್ ಜಯಚಂದ್ರನ್, ಕಾರ್ಯದರ್ಶಿ ಕಾ. ದೀಪಕ್ ಅಡ್ಯಂತಾಯ, ಕಾ.ಪಿ.ಕೆ. ಶೆಟ್ಟಿ, ರಾಜೇಶ್ ಹೊಳ್ಳ, ಭಗವಾನ್‌ದಾಸ್, ಅಪ್ಪು ಶೆಟ್ಟಿ ಉಪಸ್ಥಿತರಿದ್ದರು.