ಮಂಗಳೂರು ವಿ.ವಿ. ಘಟಿಕೋತ್ಸವ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 44ನೇ ವಾರ್ಷಿಕ ಘಟಿಕೋತ್ಸವ 2026ರ ಮಾರ್ಚ್ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಿಸಲಾಗಿದೆ. ನಿಖರವಾದ ದಿನವನ್ನು ವಿ.ವಿ.ಯ ಅಧಿಕೃತ ವೆಬ್‌ಸೈಟ್ ಮೂಲಕ ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.
ಮಂಗಳೂರು ವಿ.ವಿ.ಯ ಎಲ್ಲ ಸಂಯೋಜಿತ, ಘಟಕ ಮತ್ತು ಸ್ವಾಯತ್ತ ಕಾಲೇಜುಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಪೂರ್ಣಗೊಳಿಸಿ ಡಿ.31ರೊಳಗೆ ವಿವಿಧ ಪದವಿಗಳನ್ನು ಪಡೆಯಲು ಅರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಘಟಿಕೋತ್ಸವದಲ್ಲಿ ದೃಢೀಕರಿಸಲಾಗುತ್ತದೆ. 2025ನೇ ಅಕ್ಟೋಬರ್/ನವೆಂಬರ್, ಡಿಸೆಂಬರ್ ತಿಂಗಳಲ್ಲಿ ನಡೆಯುವ 1,3 ಮತ್ತು 5ನೇ ಸೆಮಿಸ್ಟರ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ಪುನಾರಾವರ್ತಿತ ಅಭ್ಯರ್ಥಿಗಳ ಪಟ್ಟಿ ಸೇರುವುದಿಲ್ಲ.
ಘಟಿಕೋತ್ಸವ ಸಂದರ್ಭ ಪದವಿ ಸ್ವೀಕರಿಸುವ ವಿದ್ಯಾರ್ಥಿಗಳು, ಮುಖ್ಯ ಸಭಾ ಕಾರ್ಯಕ್ರಮ ಮುಗಿದ ಅನಂತರ ಪದವಿ ಪ್ರಮಾಣ ಪತ್ರ ಸ್ವೀಕರಿಸುವ ವಿದ್ಯಾರ್ಥಿಗಳು ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆನ್ಲೈನ್ ನೋಂದಣಿ ಮಾಡಿಕೊಂಡ ಎಲ್ಲ ಸ್ನಾತಕ/ಸ್ನಾತಕೋತ್ತರ ಅಭ್ಯರ್ಥಿಗಳು ಮಾತ್ರ ಘಟಿಕೋತ್ಸವಕ್ಕೆ ಪ್ರವೇಶ ಪಡೆಯಲು ಅರ್ಹರು.
ಅರ್ಹ ಅಭ್ಯರ್ಥಿಗಳು ಪದವಿಯನ್ನು ಘಟಿಕೋತ್ಸವದಲ್ಲಿ "ಹಾಜರಿ’ ಅಥವಾ "ಗೈರುಹಾಜರಿ’ಯಲ್ಲಿ ಪಡೆದುಕೊಳ್ಳಬಹುದು. ಸಮಾರಂಭದಲ್ಲಿ ಹಾಜರಾಗಿ ಪದವಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಮಾತ್ರ ಆನ್ಲೈನ್ ನೋಂದಣಿ ಮಾಡಿಕೊಳ್ಳಬೇಕು. ಡಿ.31ರೊಳಗೆ ವಿವಿಧ ಪದವಿಗಳನ್ನು ಪಡೆಯಲು ಅರ್ಹರಾದ ಎಲ್ಲ ಪುನರಾವರ್ತಿತ ಅಭ್ಯರ್ಥಿಗಳು "ಗೈರು ಹಾಜರಿ’ಯಲ್ಲೇ ಪದವಿ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಬೇಕು. "ಇಂತಹ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಕಾಲೇಜು/ಸ್ನಾತಕೋತ್ತರ ವಿಭಾಗಕ್ಕೆ ಕಳುಹಿಸಿ ಕೊಡಲಾಗುವುದು.