ದ್ವೇಷ ಭಾಷಣ ಕಾನೂನು ಸ್ವಾಗತರ್ಹ: ವೆಲ್ಫೇರ್ ಪಾರ್ಟಿ
ಮಂಗಳೂರು: ರಾಜ್ಯ ಸರ್ಕಾರ ದ್ವೇಷ ಭಾಷಣ ತಡೆಯಲು ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ’ ವಿಧಾನಸಭೆಯಲ್ಲಿ ಮಂಡಿಸಿದ್ದು ಸ್ವಾಗತಾರ್ಹವಾಗಿದೆ. ಈ ಕಾಯ್ದೆ ಸಮರ್ಪಕವಾಗಿ ಅನುಷ್ಠಾನ ಗೊಂಡು ದ್ವೇಷಕಾರುವವರ ಮೇಲೆ ಕಠಿಣ ಶಿಕ್ಷೆಯಾಗಲಿ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ಹೇಳಿದ್ದಾರೆ.
ಕರ್ನಾಟಕ ಸೇರಿದಂತೆ ದೇಶಾದ್ಯಂತ ಕೋಮುವಾದಿ ಶಕ್ತಿಗಳು ಹಾಗೂ ಅದರ ಹಲವಾರು ವರ್ಷಗಳಿಂದ ಅಲ್ಪಸಂಖ್ಯಾತರು, ಪ್ರಗತಿಪರ ಚಿಂತಕರು ಹಾಗೂ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟಿಸಿ ಹೇಳಿಕೆ ನೀಡುವವರ ಮೇಲೆ ದ್ವೇಷಕಾರುವ ಪೋಸ್ಟರ್ ಗಳು, ದ್ವೇಷ ಭಾಷಣಗಳು ಮಾಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
ತಡವಾಗಿಯಾದರೂ ರಾಜ್ಯ ಸರ್ಕಾರ ಇಂತಹ ದ್ವೇಷ ಭಾಷಣದ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿರುವುದು ಶ್ಲಾಘನೀಯ. ಈ ಕಾಯ್ದೆಯ ಅಡಿಯಲ್ಲಿ ಮೊದಲ ಬಾರಿ ತಪ್ಪಿಗೆ 7 ವರ್ಷ ಜೈಲು, 50 ಸಾವಿರ ರೂ ದಂಡ. ಪುನರಾವರ್ತನೆ ಆದರೆ 10 ವರ್ಷ ಜೈಲು, 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದು ನೋಂದಾಯಿತ ಹಾಗೂ ನೋಂದಾಯಿತವಲ್ಲದ ಎರಡು ಸಂಘಟನೆಗಳಿಗೂ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.
ಈ ಮಸೂದೆಗೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಭಾರಿ ವಿರೋಧ ವ್ಯಕ್ತಪಡಿಸಿ ಹೋರಾಟ ಮಾಡುವುದಾಗಿ ಬೆದರಿಕೆ ಹಾಕುತ್ತಿರುವುದು ಖಂಡನೀಯ. ದ್ವೇಷ ಭಾಷಣದ ವಿರುದ್ಧ ಕಾನೂನು ಮಾಡಿದರೆ ಬಿಜೆಪಿ, ಜೆಡಿಎಸ್ ನಾಯಕರಿಗೆ ಯಾಕೆ ಸಮಸ್ಯೆ?, ಇವರ ವಿರೋಧದ ನಿಲುವು ನೋಡಿದರೆ ಸಮಾಜದಲ್ಲಿ ಶಾಂತಿ ನೆಲಸಲು ಇವರಿಗೆ ಇಷ್ಟವಿಲ್ಲ ಎಂದು ಕಾಣುತ್ತದೆ.
ಪ್ರತಿಯೊಂದಕ್ಕೂ ವಿರೋಧಿಸುವ ಬಿಜೆಪಿ ನಾಯಕರು ದ್ವೇಷ ಭಾಷಣದ ವಿರುದ್ಧ ಕಾಯ್ದೆ ಗೂ ವಿರೋಧ ಮಾಡುತ್ತಿದ್ದು ಜನರ ಮುಂದೆ ಬೆತ್ತಲಾಗಿದ್ದಾರೆ. ಅವರ ವಿಚಾರ ಬಯಲಾಗಿದೆ. ವಿಪಕ್ಷಗಳ ಯಾವುದೇ ಒತ್ತಡಕ್ಕೆ ಆಸ್ಪದ ನೀಡದೇ ರಾಜ್ಯ ಸರ್ಕಾರ ಕಾಯ್ದೆ ಜಾರಿಗೊಳಿಸಿ ಸಮಾಜದಲ್ಲಿ ಶಾಂತಿ ನೆಲೆಸಲು ಮುಂದಾಗಲಿ. ಕಾಯ್ದೆಯಡಿ ಯಾರೇ ತಪ್ಪು ಮಾಡಿದರೂ ಶಿಕ್ಷಿಸುವಂತಾಗಲಿ ಎಂದು ಅವರು ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ.