ಟರ್ಪಾಲಿನ ಜೋಪಡಿಯಿಂದ ಆಡಳಿತಸೌಧದ ಮರದಡಿಗೆ...: ವೃದ್ಧ ದಂಪತಿಗಳಿಂದ ‘ನ್ಯಾಯ’ಕ್ಕಾಗಿ ಅಹೋರಾತ್ರಿ ಧರಣಿ

ಟರ್ಪಾಲಿನ ಜೋಪಡಿಯಿಂದ ಆಡಳಿತಸೌಧದ ಮರದಡಿಗೆ...: ವೃದ್ಧ ದಂಪತಿಗಳಿಂದ ‘ನ್ಯಾಯ’ಕ್ಕಾಗಿ ಅಹೋರಾತ್ರಿ ಧರಣಿ


ಪುತ್ತೂರು: ಕಳೆದ ಒಂದು ವರ್ಷ 47 ದಿನಗಳಿಂದ ಟರ್ಪಾಲಿನ ಜೋಪಡಿಯಲ್ಲಿಯೇ ಬದುಕು ಸಾಗಿಸುತ್ತಿದ್ದ ವೃದ್ಧ ದಂಪತಿಗಳಿಬ್ಬರು ಕಳೆದ 3 ದಿನಗಳಿಂದ ಪುತ್ತೂರು ಆಡಳಿತಸೌಧದ ಮುಂಭಾಗದ ಮರದಡಿಯಲ್ಲಿ ಅಹೋರಾತ್ರಿ ಧರಣಿ ನಿರತರಾಗಿದ್ದಾರೆ. ತಮ್ಮ ವಾಸ್ತವ್ಯದ ಮನೆಯನ್ನು ಧ್ವಂಸ ಮಾಡಿರುವ ಅಧಿಕಾರಿ ವರ್ಗದ ಧೋರಣೆಯ ವಿರುದ್ಧ ಈ ವೃದ್ಧದಂಪತಿಗಳ ಹೋರಾಟ ನಡೆಯುತ್ತಿದೆ. ಈ ಧರಣಿಯ ಮೂಲಕವಾದರೂ ತಮಗೆ ನ್ಯಾಯ ಸಿಗಬಹುದು ಎಂಬ ನಂಬಿಕೆ ಈ ದಂಪತಿಗಳದ್ದಾಗಿದೆ. ಆದರೆ ಸಂಬಂಧಪಟ್ಟ ಅಧಿಕಾರಿ ವರ್ಗ ಮಾತ್ರ ಈ ಅಹೋರಾತ್ರಿ ಧರಣಿ ನಿರತರಾದ ವೃದ್ಧ ದಂಪತಿಗಳತ್ತ ಮಾನವೀಯತೆಯ ದೃಷ್ಟಿಯನ್ನೂ ಹರಿಸಿಲ್ಲ.

ಕಡಬ ತಾಲೂಕಿನ ಕೌಕ್ರಾಡಿ ಗ್ರಾಪಂ ವ್ಯಾಪ್ತಿಯ ಕಾಪಿನಬಾಗಿಲು ಎಂಬಲ್ಲಿ ವಾಸ್ತವ್ಯವಿದ್ದ ರಾಧಮ್ಮ ಹಾಗೂ ಮುತ್ತು ಸ್ವಾಮಿ ನ್ಯಾಯಕ್ಕಾಗಿ ಧರಣಿ ನಡೆಸುತ್ತಿದ್ದಾರೆ. 2024 ಡಿಸೆಂಬರ್ 11ರಂದು ಈ ವೃದ್ಧ ದಂಪತಿಗಳು ವಾಸವಾಗಿದ್ದ ಮನೆಯನ್ನು ನ್ಯಾಯಾಲಯದ ಆದೇಶದಂತೆ ಕಡಬ ತಹಶೀಲ್ದಾರ್ ನೇತೃತ್ವದಲ್ಲಿ ನೆಲಸಮ ಮಾಡಲಾಗಿತ್ತು. ಈ ಘಟನೆ ಸಾರ್ವಜನಿಕ ಆಕ್ರೋಶಕ್ಕೂ ಕಾರಣವಾಗಿತ್ತು. ನೆಲಸಮವಾದ ಮನೆಯ ಸ್ಥಳದಲ್ಲಿಯೇ ಈ ವೃದ್ಧದಂಪತಿಗಳು ಟಪಾರ್ಲಿನ ಜೋಪಡಿ ಮಾಡಿಕೊಂಡು ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಈ ನಡುವೆ ನೀತಿ ತಂಡದ ಜಯಂತ ಟಿ. ಅವರ ನೇತೃತ್ವದಲ್ಲಿ ನಿರಂತರವಾಗಿ ನ್ಯಾಯಕ್ಕಾಗಿ ಹೋರಾಟವೂ ನಡೆದಿತ್ತು. ಆದರೆ ಯಾವುದೂ ಫಲಕಾರಿಯಾಗಿರಲಿಲ್ಲ. 

ಯಾರದೋ ಮನೆಯನ್ನು ಅಕ್ರಮದ ಹಿನ್ನಲೆಯಲ್ಲಿ ನೆಲಸಮ ಮಾಡಬೇಕಾಗಿದ್ದ ಅಧಿಕಾರಿ ವರ್ಗ ತಮ್ಮ ಮನೆಯನ್ನು ನೆಲಸಮ ಮಾಡಿದ್ದಾರೆ. ನ್ಯಾಯಾಲಯದ ಆದೇಶದ ಪ್ರಕಾರ ಅವರು ನೆಲಸಮ ಮಾಡಬೇಕಾದ ಮನೆ ಕೌಕ್ರಾಡಿ ಗ್ರಾಮದಲ್ಲಿ ಇಲ್ಲ. ಆದೇಶದಲ್ಲಿ ಹೆಸರಿಸಿರುವ ಮಹಿಳೆಯ ಸ್ಥಳಕ್ಕೂ ಈಗ ನೆಲಸಮ ಮಾಡಲಾದ ಮನೆಗೂ ಯಾವುದೇ ಸಂಬಂಧ ಇಲ್ಲ. ಅಧಿಕಾರಿಗಳು ವಿನಾ ಕಾರಣ ನಮ್ಮ ಮನೆಯನ್ನು ಧ್ವಂಸ ಮಾಡುವ ಮೂಲಕ ಅನ್ಯಾಯವೆಸಗಿದ್ದಾರೆ. ಹಾಗಾಗಿ ನಮಗೆ ನ್ಯಾಯಕೊಡಿಸಬೇಕು ಎಂದು ಈ ವೃದ್ಧ ದಂಪತಿಗಳ ಪುತ್ರಿ ಸುಬ್ರಹ್ಮಣ್ಯ ತಿಳಿಸಿದ್ದಾರೆ. 

2ನೇ ಬಾರಿಗೆ ಧರಣಿ:

ಕಳೆದ ಡಿ.22ರಂದು ನೊಂದ ಕುಟುಂಬಕ್ಕೆ ನ್ಯಾಯ ನೀಡುವಂತೆ ಆಗ್ರಹಿಸಿ ನೀತಿ ತಂಡದ ನೇತೃತ್ವದಲ್ಲಿ ಪುತ್ತೂರು ತಾಲೂಕು ಆಡಳಿತ ಸೌಧದ ಮುಂದೆ ಧರಣಿ ನಡೆಸಲಾಗಿತ್ತು. ಈ ಸಂದರ್ಭ ಅಧಿಕಾರಿಗಳು 3 ದಿನಗಳ ಅವಕಾಶ ನೀಡುವಂತೆ ವಿನಂತಿಸಿದ್ದರು. ಈ ಹಿನ್ನಲೆಯಲ್ಲಿ ಧರಣಿಯನ್ನು ವಾಪಾಸು ಪಡೆಯಲಾಗಿತ್ತು. ಆದರೆ 3 ದಿನಗಳ ನಂತರವೂ ಈ ಕುಟುಂಬಕ್ಕೆ ನ್ಯಾಯ ಒದಗಿಸುವ ಯಾವುದೇ ಪ್ರಯತ್ನಗಳು ನಡೆಯದ ಹಿನ್ನಲೆಯಲ್ಲಿ ಮತ್ತೆ ಆಹೋರಾತ್ರಿ ಧರಣಿಯನ್ನು ಆರಂಭಿಸಲಾಗಿದೆ. ಇದೀಗ ನ್ಯಾಯ ಸಿಗದಿದ್ದರೆ ಈ ಸ್ಥಳಬಿಟ್ಟು ಕದಲುವುದಿಲ್ಲ ಎಂದು ಈ ವೃದ್ಧ ದಂಪತಿಗಳು ಪಟ್ಟು ಹಿಡಿದ್ದಾರೆ. ತಮಗೆ ನೆಲೆಯಾಗಿದ್ದ ಮನೆಯನ್ನು ಕಳೆದುಕೊಂಡು ಬೀದಿ ಪಾಲಾದ ಈ ವೃದ್ದ ದಂಪತಿಗಳು ಒಂದು ಹಂತದಲ್ಲಿ ದಯಾಮರಣಕ್ಕೂ ಅರ್ಜಿಸಲ್ಲಿಸಿದ್ದರು. 

ಮೈಕೊರೆಯುವ ಚಳಿಯಲ್ಲಿ:

ಕಳೆದ ಮೂರುದಿನಗಳಿಂದ ವೃದ್ಧದಂಪತಿಗಳು ಆಡಳಿತ ಸೌಧದ ಮುಂಭಾಗದಲ್ಲಿರುವ ಮರದಡಿಯಲ್ಲಿಯೇ ಮಲಗುತ್ತಿದ್ದಾರೆ. ಮೈಕೊರೆಯುವ ಚಳಿಯಲ್ಲೂ ಧರಣಿಯನ್ನು ಮುಂದುವರಿಸಿದ್ದಾರೆ. ಆದರೆ ನ್ಯಾಯ ನೀಡುವಲ್ಲಿನ ಸಮಸ್ಯೆಯನ್ನು ಪರಿಹರಿಸುವ ವಿಚಾರವನ್ನು ಪಕ್ಕಕ್ಕಿಟ್ಟರೂ ಕನಿಷ್ಟ ಮಾನವೀಯತೆಯ ನೆಲೆಯಿಂದಾದರೂ ಅಧಿಕಾರಿ ವರ್ಗ ಈ ವೃದ್ಧ ದಂಪತಿಗಳನ್ನು ಮಾತನಾಡಿಸಲು ಮುಂದಾಗಿಲ್ಲ. ಮಾಜಿ ಶಾಸಕ ಸಂಜೀವ ಮಠಂದೂರು ಈ ದಂಪತಿಗಳನ್ನು ಭೇಟಿಯಾಗಿ ಜಿಲ್ಲಾಧಿಕಾರಿ ಅವರಿಗೆ ಈ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಆದರೆ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಕೌಕ್ರಾಡಿಯ ಈ ವೃದ್ಧ ದಂಪತಿಗಳ ಬಗ್ಗೆ ವಿಚಾರಿಸಲು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಈ ತನಕ ಬಂದಿಲ್ಲ. 

ವೃದ್ಧ ದಂಪತಿಗಳಾದ ರಾಧಮ್ಮ ಹಾಗೂ ಅವರ ಪತಿ ಮುತ್ತುಸ್ವಾಮಿ ಪುತ್ರಿ ರೇಣುಕಾ ಹಾಗೂ ಪುತ್ರ ಸುಬ್ರಹ್ಮಣ್ಯ ಇದೀಗ ನ್ಯಾಯಕ್ಕಾಗಿ ಮರದಡಿಯಲ್ಲಿಯೇ ಧರಣಿ ನಡೆಸುತ್ತಿದ್ದು, ಈ ವೃದ್ಧ ದಂಪತಿಗಳಿಗೆ ನ್ಯಾಯ ನೀಡಬೇಕಾದ, ವೃದ್ಧ ದಂಪತಿಗಳ ಸಮಸ್ಯೆಗೊಂದು ಪರಿಹಾರ ನೀಡಬೇಕಾದ ಜವಾಬ್ದಾರಿ ಪುತ್ತೂರು ಉಪವಿಭಾಗಾಧಿಕಾರಿ ಅವರ ಮೇಲಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article