ಮಂಗಳೂರು ಬ್ರಹ್ಮಕುಮಾರೀಸ್ ವತಿಯಿಂದ ದಾಸ ಸಂಕೀರ್ತನ ಕುಣಿತ ಭಜನೆ ಸ್ಪರ್ಧೆ

ಮಂಗಳೂರು ಬ್ರಹ್ಮಕುಮಾರೀಸ್ ವತಿಯಿಂದ ದಾಸ ಸಂಕೀರ್ತನ ಕುಣಿತ ಭಜನೆ ಸ್ಪರ್ಧೆ


ಮಂಗಳೂರು: ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ದಾಸ ಸಂಕೀರ್ತನ ಕುಣಿತ ಭಜನೆ” ಸ್ಪರ್ಧೆ ಏ.12 ರಂದು ವಿಶ್ವ ಶಾಂತಿ ಮಂದಿರದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. 

ಯುವ ಸಮಾಜವನ್ನು ಪ್ರೋತ್ಸಾಹಿಸುವುದರೊಂದಿಗೆ ಕುಣಿತ ಭಜನಾ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ವಿಶ್ವೇಶ್ವರಿ ಅವರು ಆಧ್ಯಾತ್ಮಿಕ ಸಂದೇಶವನ್ನು ನೀಡಿ 'ದಾಸ ಸಂಕೀರ್ತನೆ ಮತ್ತು ಭಜನೆಗಳು ಕೇವಲ ಸಂಗೀತವಲ್ಲ, ಅವು ಆತ್ಮಶುದ್ಧಿ ಮತ್ತು ಮನಶ್ಶಾಂತಿಯ ಸಾಧನಗಳಾಗಿವೆ. ಇಂದಿನ ವೇಗದ ಜೀವನದಲ್ಲಿ ಮಾನವನಿಗೆ ಒಳಗಿನ ಶಾಂತಿ ಅತ್ಯವಶ್ಯಕವಾಗಿದೆ. ಭಗವಂತನ ಸ್ಮರಣೆಯೊಂದಿಗೆ ಭಜನೆ ಮಾಡುವುದರಿಂದ ಮನಸ್ಸು ಏಕಾಗ್ರವಾಗುತ್ತದೆ ಹಾಗೂ ಜೀವನದಲ್ಲಿ ಸಕಾರಾತ್ಮಕತೆ ಬೆಳೆಯುತ್ತದೆ. ಯುವಜನತೆ ಈ ರೀತಿಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ' ಎಂದ ಅವರು ಭಜನೆಯ ಮೂಲಕ ಮನಶ್ಶಾಂತಿ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಬೆಳವಣಿಗೆ ಸಾಧ್ಯವೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಮಾಧವ ಎಂ. ಅಂಚನ್ ಅವರು ಭಾಗವಹಿಸಿ, ದಾಸ ಸಾಹಿತ್ಯದ ಮಹತ್ವ ಹಾಗೂ ಭಜನೆಯ ಆಧ್ಯಾತ್ಮಿಕ ಪ್ರಭಾವದ ಕುರಿತು ಮಾತನಾಡಿದರು. 

ಮತ್ತೊಬ್ಬ ಅತಿಥಿಯಾಗಿ ವಿಜಯ ಎನ್. ಕುಕ್ಯಾನ್ ಅವರು ಉಪಸ್ಥಿತರಿದ್ದು, ಯುವಜನತೆ ಭಜನೆಗಳ ಮೂಲಕ ಉತ್ತಮ ಸಂಸ್ಕಾರಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಹಂಪಿ ವಿಶ್ವವಿದ್ಯಾಲಯದ ಸಂಶೋಧಕಿ, ನ್ಯಾಯಾಧೀಶರಾಗಿ ಡಾ. ರತಿ ಅವರು, ಸ್ಪರ್ಧಾರ್ಥಿಗಳ ಪ್ರದರ್ಶನವು ಅತ್ಯಂತ ಪ್ರಶಂಸನೀಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಸ್ಪರ್ಧೆಯಲ್ಲಿ ಅನೇಕ ತಂಡಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದವು. 

ಸ್ಪರ್ಧೆಯಲ್ಲಿ ಶೇಷಶಾಯನ ಕುಣಿತ ಭಜನಾ ಮಂಡಳಿ, ಬೈಕಂಪಾಡಿ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ಶ್ರೀ ಮಹಾಲಿಂಗೇಶ್ವರ ಕುಣಿತ ಭಜನಾ ಮಂಡಳಿ ಪಡೆದುಕೊಂಡರೆ, ತೃತೀಯ ಸ್ಥಾನವನ್ನು ಬ್ರಹ್ಮಶ್ರೀ ನಾರಾಯಣ ತಂಡ ಪಡೆದುಕೊಂಡಿತು. ಬ್ರಹ್ಮ ಕುಮಾರಿ ಜಯಕ್ಕ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸ್ನೇಹಕ್ಕ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರೀಸ್ ಸದಸ್ಯರು, ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಸಮಗ್ರ ಕಾರ್ಯಕ್ರಮವು ಆಧ್ಯಾತ್ಮಿಕತೆ ಮತ್ತು ಸಾಂಸ್ಕೃತಿಕ ಸೊಗಡಿನಿಂದ ಕಂಗೊಳಿಸಿತು.

ಭಾಗವಹಿಸಿದ ಪ್ರಮುಖ ತಂಡಗಳು:

ಬ್ರಹ್ಮಶ್ರೀ ನಾರಾಯಣ ತಂಡ, ಗುರುನಗರ, ಪದವಿನಂಗಡಿ, ಅಂಜನೇಯ ದೇವಸ್ಥಾನ ಕುಣಿತ ಭಜನಾ ಮಂಡಳಿ, ಬ್ರಹ್ಮಲಿಂಗೇಶ್ವರ ಕುಣಿತ ಭಜನಾ ಮಂಡಳಿ, ವಿಠಲ ರುಕ್ಮಾಯಿ ಕುಣಿತ ಭಜನಾ ಮಂಡಳಿ, ಶ್ರೀ ಮಹಾಲಿಂಗೇಶ್ವರ ಕುಣಿತ ಭಜನಾ ಮಂಡಳಿ, ಶ್ರೀ ಮಲ್ಲಿಕಾರ್ಜುನ ಕುಣಿತ ಭಜನಾ ಮಂಡಳಿ, ಶ್ರೀ ದುರ್ಗಾ ಕುಣಿತ ಭಜನಾ ಮಂಡಳಿ, ನಂದ ಗೋಕುಲ ಕುಣಿತ ಭಜನಾ ತಂಡ, ಶೇಷಶಾಯನ ಕುಣಿತ ಭಜನಾ ಮಂಡಳಿ, ಬೈಕಂಪಾಡಿ

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article