ಸರಕಾರಿ ಆಸ್ಪತ್ರೆಗಳ ಖಾಸಗಿ ಆಸ್ಪತ್ರೆಗಳಿಗೆ ಕರಾರು ಒಪ್ಪಂದಕ್ಕೆ ಡಿವೈಎಫ್ಐ ವಿರೋಧ, ಒಪ್ಪಂದ ಹಿಂಪಡೆಯಲು ಆಗ್ರಹ

ಸರಕಾರಿ ಆಸ್ಪತ್ರೆಗಳ ಖಾಸಗಿ ಆಸ್ಪತ್ರೆಗಳಿಗೆ ಕರಾರು ಒಪ್ಪಂದಕ್ಕೆ ಡಿವೈಎಫ್ಐ ವಿರೋಧ, ಒಪ್ಪಂದ ಹಿಂಪಡೆಯಲು ಆಗ್ರಹ


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಆರೋಗ್ಯ ಸೇವೆ ಒದಗಿಸುವ ಹಿತದೃಷ್ಟಿಯಿಂದ ಖಾಸಗೀ ಆಸ್ಪತ್ರೆಗಳೊಂದಿಗೆ ಕರಾರು ಒಪ್ಪಂದ ಮಾಡಿಕೊಂಡಿರುವ ಕರ್ನಾಟಕ ರಾಜ್ಯ ಸರಕಾರದ ನಡೆಯನ್ನು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಕಟುವಾಗಿ ವಿರೋಧಿಸುತ್ತದೆ. ಇದು ಸರಕಾರಿ ಆಸ್ಪತ್ರೆಗಳನ್ನು ಸಂಪೂರ್ಣವಾಗಿ ಕತ್ತು ಹಿಸುಕಿ ಸಾಯಿಸಿ ಖಾಸಗೀ ಆಸ್ಪತ್ರೆಗಳಿಗೆ ಲಾಭಿ ಮಾಡಿಕೊಡುವ ಉದ್ದೇಶ ಈ ತೀರ್ಮಾನದ ಹಿಂದೆ ಅಡಗಿದೆ ಎಂದು ಆರೋಪಿಸಿದೆ. ಆರೋಗ್ಯ ಇಲಾಖೆ ಈ ಒಪ್ಪಂದವನ್ನು ಕೂಡಲೇ ರದ್ದುಗೊಳಿಸಿ ಸರಕಾರಿ ಆಸ್ಪತ್ರೆಗಳನ್ನು ಬಲಬಡಿಸಲು ಕ್ರಮಕೈಗೊಳ್ಳಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಒತ್ತಾಯಿಸಿದೆ. 

ಡಿವೈಎಫ್ಐ ಕಳೆದ ಹಲವಾರು ವರುಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿ ಖಾಸಗೀ ಆಸ್ಪತ್ರೆಗಳನ್ನು ನಿಯಂತ್ರಿಸಲು, ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ,ಸಮುದಾಯ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳನ್ನು ಸ್ಥಾಪಿಸಿ ,ಜಿಲ್ಲೆಗೊಂದು ಮೆಡಿಕಲ್ ಕಾಲೇಜು ನಿರ್ಮಿಸಬೇಕೆಂದು ಒತ್ತಾಯಿಸುವ ಚಳುವಳಿ ರೂಪಿಸಿ ಎಚ್ಚರಿಸುತ್ತಾ ಬಂದರೂ ಈ ಬಗ್ಗೆ ಒಂದೇ ಒಂದು ಕ್ರಮಕೈಗೊಳ್ಳುವಲ್ಲಿ ನಮ್ಮನ್ನಾಳುವ ಸರಕಾರಗಳು ವಿಫಲವಾಗಿದೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆ ಸುಲಿಗೆ ರಾಜಾರೋಷವಾಗಿ ನಡೆಯುತ್ತಿದ್ದು, ಖಾಸಗೀ ಆಸ್ಪತ್ರೆಗಳ ತಪ್ಪಾದ ಚಿಕಿತ್ಸಾ ಕ್ರಮ, ಅನಗತ್ಯ ಪರೀಕ್ಷೆ, ವಿಪರೀತ ಶುಲ್ಕ ವಸೂಲಿ ವಿರುದ್ದ ಡಿವೈಎಫ್ಐ ಆರೋಪಿಸುತ್ತಾ ಬಂದರೂ ಖಾಸಗೀ ಆಸ್ಪತ್ರೆಗಳ ವಿರುದ್ಧ ಈವರೆಗೂ ಕ್ರಮ ಜರುಗಿಸಲು ಸರಕಾರ ಎದೆಗಾರಿಕೆ ತೋರಿಸಿಲ್ಲ. ಈಗಾಗಲೇ ಈ ಹಿಂದೆ ಉಳ್ಳಾಲ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು, ಸಮುದಾಯ ಆಸ್ಪತ್ರೆಯನ್ನು ಅಲ್ಲಿನ ಖಾಸಗೀ ಮೆಡಿಕಲ್ ಕಾಲೇಜು ಧಣಿಗಳಿಗೆ, ಸರಕಾರಿ ವೆನ್ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಗಳನ್ನು ಪಿಪಿಪಿ ಅಡಿಯಲ್ಲಿ ಕೆಎಮ್ಸಿ ಆಸ್ಪತ್ರೆಗೆ ವಹಿಸಿಕೊಟ್ಟ ತೀರ್ಮಾನವನ್ನು ಡಿವೈಎಫ್ಐ ವಿರೋಧಿಸುತ್ತಾ ಬಂದಿದೆ. 

ಸರಕಾರಿ ಆಸ್ಪತ್ರೆಗಳನ್ನು ಖಾಸಗೀ ಹಿಡಿತದಿಂದ ಬಿಡುಗಡೆಗೊಳಿಸಿ ಅಂತಹ ಆಸ್ಪತ್ರೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಸರಕಾರದ ಗಮನ ಸೆಳೆದರೂ ಈ ಬಗ್ಗೆ ಆಲೋಚಿಸಲು ಮುಂದಾಗುವ ಬದಲು ಈಗ ಅಂತಹದೇ ತೀರ್ಮಾನಕ್ಕೆ ಬಂದಿರುವುದು ನಿಜಕ್ಕೂ ಜನವಿರೋಧಿ ನಡೆ. ಬೆಳ್ತಂಗಡಿ ತಾಲೂಕು ಆಸ್ಪತ್ರೆ, ಮೂಡಬಿದ್ರೆ ಆರೋಗ್ಯ ಕೇಂದ್ರವನ್ನು ಆಳ್ವಾಸ್ ಹೆಲ್ತ್ ಸೆಂಟರ್ ನೊಂದಿಗೆ, ಬಂಟ್ವಾಳ ತಾಲೂಕು ಆಸ್ಪತ್ರೆಯನ್ನು ಎ.ಜೆ ವೈದ್ಯಕೀಯ ಕಾಲೇಜಿನೊಂದಿಗೆ ಹಾಗೂ ವಿಟ್ಲ ಸಮುದಾಯ ಆಸ್ಪತ್ರೆಯನ್ನು ಯೆನೆಪೋಯ ವೈದ್ಯಕೀಯ ಕಾಲೇಜಿನೊಂದಿಗೆ ಕರಾರು ಒಪ್ಪಂದಕ್ಕೆ ಕಾಂಗ್ರೇಸ್ ಸರಕಾರ ಅನುಮೋದನೆ ನೀಡಿರುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರಿ ಆಸ್ಪತ್ರೆಯ ಅಭಿವೃದ್ಧಿ ವಿರೋಧಿ ತೀರ್ಮಾನವನ್ನು ಜಿಲ್ಲೆಯ ಜನ ಒಕ್ಕೊರಲಿನಿಂದ ಖಂಡಿಸಬೇಕಾಗಿದೆ ಮತ್ತು ಹೋರಾಟವನ್ನು ರೂಪಿಸಬೇಕಾಗಿದೆ.

ಸದ್ಯ ಜಿಲ್ಲೆಯ ಜನ ಸರಕಾರದ ಮುಂದೆ ಪ್ರಭಲವಾದ ಬೇಡಿಕೆ ಇಟ್ಟಿರೋದು ದ.ಕ ಜಿಲ್ಲೆಯಲ್ಲಿ ಶ್ರೀ ಜಯದೇವ ಹೃದ್ರೋಗ ಸಂಶೋಧನ ಸಂಸ್ಥೆ ಮತ್ತು ಕಿದ್ವಾಯಿ ಸ್ಮಾರಕ ಗಂಥಿ( ಕ್ಯಾನ್ಸರ್ ಆಸ್ಪತ್ರೆ ) ಕೇಂದ್ರದ ಸ್ಥಾಪನೆಗೆ ಅಂತಹ ಬೇಡಿಗಳನ್ನು ಪರಿಗಣಿಸುವುದನ್ನು ಬಿಟ್ಟು ಇರುವ ಸರಕಾರಿ, ಆರೋಗ್ಯ ಕೇಂದ್ರ ,ಸಮುದಾಯ ಆಸ್ಪತ್ರೆಗಳನ್ನು ಖಾಸಗೀ ಆಸ್ಪತ್ರೆಗಳ ಹಿಡಿತಕ್ಕೆ ವಹಿಸಿಕೊಡುವ ಒಪ್ಪಂದವನ್ನಲ್ಲ ಎಂದು ಡಿವೈಎಫ್ಐ ಬಲವಾಗಿ ಆಗ್ರಹಿಸಿದೆ. 

ಸರಕಾರ, ಆರೋಗ್ಯ ಇಲಾಖೆ ಈ ಕೂಡಲೇ ಸರಕಾರಿ ಆರೋಗ್ಯ ಕೇಂದ್ರ, ಸಮುದಾಯ, ತಾಲೂಕು ಆಸ್ಪತ್ರೆಗಳನ್ನು ಖಾಸಗೀ ಆಸ್ಪತ್ರೆಗಳ ಹಿಡಿತಕ್ಕೆ ವಹಿಸಿಕೊಡುವ ಕರಾರು ಒಪ್ಪಂದವನ್ನು ರದ್ದುಗೊಳಿಸಬೇಕು ಹಾಗೂ ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸುವ  ಮತ್ತು ಜಯದೇವ, ಕಿದ್ವಾಯಿ, ನಿಮಾನ್ಸ್ ಆಸ್ಪತ್ರೆಗಳನ್ನು ಸ್ಥಾಪಿಸಲು ಮುಂದಾಗಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ. 

ಇಲ್ಲದಿದ್ದಲ್ಲಿ ಡಿವೈಎಫ್ಐ ಮುಂದಿನ ದಿನ ಜಿಲ್ಲಾ ಉಸ್ತುವಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡುರಾವ್ ಕಚೇರಿ ಚಲೋ ಹೋರಾಟವನ್ನು ಕೈಗೊಳ್ಳಲಿದ್ದೇವೆಂದು ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಎಚ್ಚರಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article